ಪ್ರತಿಯೊಂದು ಮನಸ್ಸಿಗೂ ತಾನು ಕಂಡ ಕನಸು ನನಸಾಗಬೇಕೆಂಬ ಬಯಕೆ. ಬಯಸಿದ್ದು ಸಿಗಬೇಕೆಂಬ ಆಸೆ. ಆದರೆ ನಮ್ಮ ಹಣೆಬರಹದಲ್ಲಿ ಅದು ಸಿಗುವುದಿಲ್ಲ ಎಂದಾಗ ನಿರಾಸೆ ಉಂಟಾಗುತ್ತದೆ. ಬಯಕೆಯ ಜತೆಯಲ್ಲಿ ಬದುಕಿನ ಬಂಡಿ ಸಾಗುತ್ತಿದೆ. ಜೀವನದಲ್ಲಿ ಎಷ್ಟೆಲ್ಲಾ ಕನಸುಗಳನ್ನು ಕಾಣುತ್ತೇವೆ. ಅವೆಲ್ಲವೂ ನನಸಾಗಿಬಿಟ್ಟರೆ ಪ್ರಪಂಚದಲ್ಲಿ ನಮ್ಮಷ್ಟು ಅದೃಷ್ಟವಂತರು ಯಾರು ಇಲ್ಲ ಎಂಬ ಉತ್ಸಾಹ ಹೊರಹೊಮ್ಮುತ್ತದೆ. ನಾವು ಬಯಸಿದ್ದನ್ನೆಲ್ಲಾ ದೇವರು ನೀಡುವಂತಿದ್ದರೆ ಕಣ್ಣೀರಿನ ಸುಳಿವೇ ನಮಗೆ ಇರುತ್ತಿರಲಿಲ್ಲವೇನೋ? ಸದಾ ಸಂತೋಷದಿಂದ, ನೆಮ್ಮದಿಯಿಂದ ಇರಬೇಕು ಅಂದುಕೊಳ್ಳುತ್ತೇವೆ ಆದರೆ ವಿಧಿಯ ಆಟ ಬೇರೆಯೇ ಇರುತ್ತದೆ. ಸಂತೋಷ, ನೆಮ್ಮದಿಯ ಬದಲು ನೋವು ಕಣ್ಣೀರೇ ನಮ್ಮ ಪಾಲಿಗೆ ಉಳಿಯುವುದು. ಇದು ಶೇಕಡಾ ನೂರರಷ್ಟು ಸತ್ಯ.
ಪ್ರಾಣಿ ಪಕ್ಷಿಗಳ ಹೋಲಿಕೆಯಲ್ಲಿ ಮನುಷ್ಯನ ಜೀವನ ಅತ್ಯಂತ ಕಷ್ಟಕರವಾದುದು. ಏಕೆಂದರೆ, ಪ್ರಾಣಿಗಳಿಗೆ ಬಯಕೆ ಇರುವುದಿಲ್ಲ. ಯಾವುದೇ ಯೋಚನೆ ಇಲ್ಲ ಸಂತೋಷದಿಂದ ಜೀವಿಸುತ್ತವೆ. ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು. ಉದಾಹರಣೆಗೆ ನಮ್ಮ ಜತೆಗೆ ಒಡನಾಟದಲ್ಲಿರುವವರು ಮೊದಮೊದಲು ಸಂತೋಷವಾಗಿ ಹೀಗೆ ಇರುತ್ತಾರೇನೋ ಎಂಬಂತೆ ನಟಿಸುತ್ತಾರೆ. ನಾವು ಕೂಡ ಮುಂದೆ ಈ ಭಾವನೆ ಹೀಗೆ ಉಳಿಯುತ್ತದೆಂದು ಖುಷಿಯಾಗಿರುತ್ತೇವೆ. ಆದರೆ ಎಲ್ಲ ಬದಲಾಗಿ ಪರಿಸ್ಥಿತಿ ನೋವಿನೆಡೆಗೆ ವಾಲುತ್ತದೆ. “ಅಂದುಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ..’ ಎಂಬ ಹಾಡು ಇಂತಹ ಘಟನೆಗಳ ಹೋಲಿಕೆಯಲ್ಲಿಯೇ ಹುಟ್ಟಿಕೊಂಡಿರುವುದು.
ನಾವೊಂದು ನೆನೆದರೆ ದೈವವೊಂದು ಬಗೆಯುತ್ತದೆ ಎಂಬ ಗಾದೆ ಮಾತು ಎಷ್ಟು ಸತ್ಯ. ಮನುಷ್ಯ ತನಗಿಷ್ಟವಾದದ್ದನ್ನೆಲ್ಲಾ, ಸುಂದರವಾಗಿ ಕಾಣುವುದನ್ನೆಲ್ಲ ಬಯಸಿಬಿಡುತ್ತಾನೆ. ತನಗಿಷ್ಟದಂತೆ ಬದುಕು ರೂಪುಗೊಳ್ಳಬೇಕೆಂದು ಬಯಸುವುದು ಸಹಜ ಆದರೆ ಪರಿಸ್ಥಿತಿ, ಪರಿಣಾಮಗಳು, ದೈವಲೀಲೆ, ಅದೃಷ್ಟ ಇವೆಲ್ಲವೂ ಮನಸ್ಸಿನ ಬಯಕೆಯ ಜತೆಯಲ್ಲಿ ಹೆಜ್ಜೆ ಇಡುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದೇ ಬಹುತೇಕ ಸತ್ಯ. ಹೀಗಿರುವಾಗ ನಾವು ಬಯಸಿದಂತೆಲ್ಲಾ ನಮ್ಮ ಬದುಕು ಇರುವುದಿಲ್ಲ.
-ಸಂಗೀತಶ್ರೀ ಕೆ.
ಅರೆಯೂರು ಭೋವಿಪಾಳ್ಯ