Advertisement

ಮಹಾನದಿಯಾಗಲಿ ಜೀವನ…

09:45 PM Oct 20, 2019 | Team Udayavani |

ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ ಪ್ರಪಂಚದ ನಗರಗಳು ಹುಟ್ಟಿಕೊಂಡಿರುವುದು ನದಿ ದಡದಲ್ಲೇ.

Advertisement

ಸದಾ ಚಲನಶೀಲ
ನದಿ ಎನ್ನುವುದು ನಿರಂತರ ಚಲನೆ ಉಳ್ಳದ್ದು. ಏನೇ ಅಡೆ ತಡೆ ಎದುರಾದರೂ ಅವುಗಳನ್ನೆಲ್ಲ ದಾಟಿ ತನ್ನ ಗಮ್ಯದತ್ತ ಸಾಗುತ್ತಿರುತ್ತದೆ. ತನ್ನ ದಾರಿಯಲ್ಲಿ ಬಂಡೆ ಇರಲಿ ಪರ್ವತವೇ ಎದುರಾಗಲಿ ಅದನ್ನು ಕೊರೆದು ಚಲಿಸುತ್ತಲೇ ಇರುತ್ತದೆ. ಇದು ನಮ್ಮ ಬದುಕಿಗೆ ಪಾಠವಾಗಬಲ್ಲದು. ಬದುಕಿನ ನಿರಂತರ ಪ್ರಯಾಣದಲ್ಲಿ ಎದುರಾಗುವ ಹತಾಶೆ, ನೋವು, ಅವಮಾನದಂತಹ ಅನೇಕ ತೊಡರು ನಮ್ಮತನವನ್ನು ಇಲ್ಲವಾಗಿಸಲು ಪ್ರಯತ್ನಿಸಬಹುದು. ಇವುಗಳಿಗೆ ತಲೆಬಾಗಿ ಶರಣಾದರೆ ಸೋತಂತೆ. ಗುರಿ ತಲುಪುವ ಹಾದಿಯ ಮಧ್ಯದಲ್ಲೇ ಕುಸಿದು ಬಿದ್ದಂತೆ. ನಿರಂತರ ಪರಿಶ್ರಮಪಟ್ಟರೆ ನದಿ ಬಂಡೆಯನ್ನು ಕೊರೆದು ಮುನ್ನುಗ್ಗುವಂತೆ ನಾವೂ ಗೆಲುವಿನ ಗುರಿ ತಲುಪಬಹುದು.

ವಿವಿಧ ರೂಪ
ನದಿಯದ್ದು ವೈವಿಧ್ಯ ತುಂಬಿದ ರೂಪ. ಆರಂಭದಲ್ಲಿ ಸಣ್ಣ ತೊರೆಯಾಗಿ ಹರಿದು ಕ್ರಮೇಣ ವೇಗ, ಶಕ್ತಿ ಪಡೆದುಕೊಳ್ಳುತ್ತದೆ. ಗುಡ್ಡ ಎದುರಾದರೆ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಪ್ರಪಾತ ಇದ್ದರೆ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಮಳೆಗಾಲದಲ್ಲಿ ರೊಚ್ಚಿಗೆದ್ದರೆ ಬೇಸಗೆಯಲ್ಲಿ ನಿಧಾನವಾಗಿ ಸಮುದ್ರದತ್ತ ಸಾಗುತ್ತದೆ. ಒಟ್ಟಿನಲ್ಲಿ ಚಲನೆಯಿಂದ ವಿಮುಖವಾಗುವುದೇ ಇಲ್ಲ.

ನಮ್ಮ ಬದುಕು ನದಿಯಂತಾಗಲಿ
ನದಿಯಂತೆ ನಾವು ಇತರರ ಬಾಳಿಗೆ ನೆರವಾಗಬೇಕು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಂತೆ ಕೆಲವೊಮ್ಮೆ ನಮ್ಮ ಬದುಕು ಸಂತೋಷ, ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಕಾಲ ಸರಿದು ಬೇಸಗೆ ಬಂದಾಗ ನದಿ ಬತ್ತುವಂತೆ ನಮಗೂ ನೋವು ಎದುರಾಗಬಹುದು. ಹಾಗಂತ ಕುಗ್ಗಿದರೆ ಜೀವನವೇ ತಟಸ್ಥವಾಗಿ ಬಿಡುತ್ತದೆ. ಬಂಡೆಯಂತೆ ಕಷ್ಟ ಇದ್ದಕ್ಕಿದ್ದಂತೆ ಅಡ್ಡಬರಬಹುದು. ಅದನ್ನು ಒಮ್ಮೆಲೆ ಒಡೆಯಲು ಸಾಧ್ಯವಾಗದಿರಬಹುದು. ಇನ್ನಷ್ಟು ಪರಿಶ್ರಮ ಹಾಕಿ ನಿರಂತರ ಪ್ರಯತ್ನ ನಡೆಸಿದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಕಣ್ಣ ಮುಂದೆಯೇ ಇದೆ.

-ರಮೇಶ್‌ ಬಳ್ಳಮೂಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next