Advertisement

ಚೌಕಾಶಿಯೇ ಜೀವನ

12:30 AM Mar 22, 2019 | |

ಬೆಳೆಯುತ್ತಿರುವ ಜಗತ್ತಿನಲ್ಲಿ ಜೀವನ ಎಂಬುವ ಅಮೂಲ್ಯವಾದ ವಸ್ತು ಬಹಳಷ್ಟು ದುಬಾರಿಯಾಗಿಬಿಟ್ಟಿದೆ. ಜನರು ಅದನ್ನು ಸ್ವಪ್ರೇರಣೆಯಿಂದ, ಸ್ವಂತಿಕೆಯಿಂದ ನಡೆಸಲಾಗದೆ ಇತರರಿಂದ ಇಂತಿಷ್ಟೇ ಬೆಲೆಯನ್ನು ನಿಗದಿಗೊಳಿಸಿ ಸಾಧ್ಯವಾದಷ್ಟು ಅದನ್ನು ಕಡಿತಗೊಳಿಸುವುದರ ಮೂಲಕ ಅದರ ಸಾಕ್ಷಾತ್ಕಾರತೆಯ ಸವಿಯನ್ನು ಸವಿಯುತ್ತಿದ್ದಾರೆ. 

Advertisement

ಹೌದು, ಹೇಗೆ ಜಗತ್ತು ಋತು ಕಳೆದಂತೆಲ್ಲ ತನ್ನೆಲ್ಲ ನೈಸರ್ಗಿಕ ಮೂಲಗಳನ್ನು , ಇಂಧನಗಳನ್ನು ಕಡಿಮೆಗೊಳಿಸುತ್ತ ಚೌಕಾಸಿತನವನ್ನು ನಡೆಸುತ್ತಿದೆಯೋ ಅಂತೆಯೇ ಇವೆಲ್ಲದರ ಉಪಯೋಗವನ್ನಾಗಲಿ ಅಥವಾ ಪ್ರಯೋಜನವನ್ನಾಗಲಿ ಪಡೆಯುತ್ತಿರುವಂತಹ ಬುದ್ಧಿಜೀವಿಯಾದ ಮಾನವನು ಕೂಡ ತನ್ನ ಜೀವನವನ್ನು ಚೌಕಾಸಿತನದಲ್ಲಿಯೇ ಕಳೆಯುತ್ತಿದ್ದಾನೆ. ಮೊತ್ತಮೊದಲಾಗಿ ಈ ಚೌಕಾಸಿ ಜೀವನವು ಕಾಲದಿಂದ ಕಾಲಕ್ಕೆ, ಜನಾಂಗದಿಂದ ಜನಾಂಗಕ್ಕೆ ಮರುಕಳಿಸುತ್ತ ಬರುತ್ತಿದೆ. ಲಾಭದ ಉದ್ದೇಶವನ್ನು ಇಟ್ಟುಕೊಂಡಿರುವಂತಹ ಈ ಚೌಕಾಸಿ ಜೀವನ ಆಧುನಿಕ ಯುಗದಲ್ಲಿ ಬಂದದ್ದಲ್ಲ. ಅಂದಿನ ದೇವತೆಗಳ ಕಾಲದಲ್ಲಿಯೂ ವೀರಪುರುಷರ ಕಾಲದಿಂದಲೂ ರೂಢಿಯಲ್ಲಿದೆ.
 
ಹೌದು, ದೇವತೆಗಳ ಕಾಲದಲ್ಲಿ ಅದೆಷ್ಟೋ ಅನ್ಯಾಯ, ಅಧರ್ಮಗಳನ್ನು ಮಾಡಿದ ರಾಕ್ಷಸರು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರಾಣಭಿಕ್ಷೆಯನ್ನು ಬೇಡುವುದೇ ದೊಡ್ಡ ಚೌಕಾಸಿ ಜೀವನವಾಗಿತ್ತು. ಅದು ಕೂಡ ವಿಧ ವಿಧವಾದ ವ್ರತಗಳನ್ನು , ತಪಸ್ಸನ್ನು , ಪೂಜೆ-ಪುನಸ್ಕಾರಗಳನ್ನು ಮಾಡುವುದರ ಮೂಲಕ ತಮ್ಮ ಸ್ವಾರ್ಥದ ಸಾರ್ಥಕತೆಯನ್ನು ಕಾಣುತ್ತಿದ್ದರು. ಆದರೆ ಈ ಚೌಕಾಸಿ ಜೀವನ ದೇವಯುಗದಲ್ಲೇ ಕೊನೆ ಕಾಣಲಿಲ್ಲ. ಕ್ರಿ.ಶ.ದ ನಂತರ ಬಂದ ವೀರಪುರುಷರ ಕಾಲಕ್ಕೂ ತನ್ನ ಒಂದು ಕಾಲನ್ನು ಚಾಚಿಬಿಟ್ಟಿತ್ತು. ರಾಜ್ಯಪಟ್ಟದ ಆಸೆಗಾಗಿ ಬಾಳುತ್ತಿದ್ದ ವೀರರೆಲ್ಲರೂ ತಮ್ಮ ರಾಜ್ಯದ ಉಳಿವಿಗಾಗಿ, ರಾಜ್ಯಭಾರದ ಆಸೆಗಾಗಿ ರಾಜ್ಯವನ್ನು ಬಿಟ್ಟರೆ ಮಡದಿ ಮಕ್ಕಳನ್ನು ನೀಡುವುದಾಗಿ, ಪ್ರಾಣತ್ಯಾಗ ಮಾಡಿದರೆ ಕುಟುಂಬಕ್ಕೆ ಸಹಾಯ ಮಾಡುವುದಾಗಿ, ನಿಧಿಯನ್ನು ಹುಡುಕಿದರೆ ಅರ್ಧ ಪಾಲು ನೀಡುವುದಾಗಿ ಚೌಕಾಸಿತನವನ್ನು ನಡೆಸುತ್ತ ಬಂದರು. ಆದರೆ, ವಿಚಿತ್ರ ಸಂಶಯಾಸ್ಪದ ವಿಷಯವೆಂದರೆ, ಇಂದು ಜಗತ್ತು ತನ್ನ ಅಸ್ತಿತ್ವವನ್ನು ಮೆರೆದು ನಿಂತಿದೆ. 

ಜನರೆಲ್ಲ ತಮ್ಮ ದೈನಂದಿನ ಜೀವನದ ಸಾರ್ಥಕತೆಯನ್ನು ಕಾಣುವ ರೀತಿ ಬದಲಾಗಿದೆ. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ರಾಕೆಟಿನಂತೆ ಬಾನೆತ್ತರಕ್ಕೆ ಜಿಗಿಯುತ್ತಿದ್ದರೂ ಕೂಡ ಈ ಚೌಕಾಸಿ ಜೀವನದ ಗೋಳು ಇನ್ನೂ ನಿಂತಿಲ್ಲ. ಯಾವಾಗಿನಿಂದಲೂ ಆಚರಿಸಿಕೊಂಡ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ನಶಿಸಿಹೋದರೂ ಈ ಚೌಕಾಸಿ ಪದ್ಧತಿ ಇನ್ನೂ ಮುಂದುವರಿಯುತ್ತ ಬಂದಿದೆ. ಅದು ಕೂಡ ಅಂದಿಗಿಂತ ಅಧಿಕ ಪ್ರಮಾಣದಲ್ಲಿ. ಹೌದು ಸಾಮಾನ್ಯವಾಗಿ ಆಧುನಿಕ ಜೀವನ ಅಧಿಕ ಚೌಕಾಸಿಯಾಗಿ ಹೋಗಿಬಿಟ್ಟಿದೆ. ಅದು ಹೇಗೆಂದರೆ, ದೊಡ್ಡ ವಿಷಯಗಳಿಂದ ಹಿಡಿದು ಚಿಕ್ಕ ವಿಷಯಗಳವರೆಗೂ ಅಂದರೆ ಎರಡು ರಾಷ್ಟ್ರಗಳ ನಡುವಿನ ಒಪ್ಪಂದದಲ್ಲಿ ಚೌಕಾಸಿ, ವಾಹನ, ಅಂಗಡಿಗಳ ಖರೀದಿಯಲ್ಲಿ, ನಿವೇಶನ, ಖಾಲಿ ಜಾಗ ಖರೀದಿಯಲ್ಲಿ ಚೌಕಾಸಿ ಒಂದು ರೀತಿಯಾದರೆ ಇನ್ನು ವಸ್ತುಗಳ ಮಾರಾಟದಲ್ಲಿ ರಖಂ ವ್ಯಾಪಾರಸ್ಥರು ತಯಾರಕರ ಬಳಿ, ಚಿಲ್ಲರೆ ವ್ಯಾಪಾರಸ್ಥರು ರಖಂ ವ್ಯಾಪಾರಸ್ಥರ ಬಳಿ, ಗ್ರಾಹಕರು ಚಿಲ್ಲರೆ ವ್ಯಾಪಾರಸ್ಥರ ಬಳಿ ಚೌಕಾಸಿ ಮಾಡಿಯೇ ವಸ್ತುಗಳನ್ನು ಖರೀದಿಸುತ್ತಾರೆ. ಈ ಚೌಕಾಸಿ ಜೀವನ ಕೆಲವೊಮ್ಮೆ ನೇರವಾಗಿ ಆಗದಿದ್ದರೂ ಕೆಲವೊಮ್ಮೆ ದೊಡ್ಡ ವ್ಯಕ್ತಿಗಳ ಹೆಸರನ್ನು ಬಳಸಿಯಾದರೂ ಆಗುವುದಂತೂ ಖಂಡಿತ. 

ಕೆಲವೊಂದು ವಿಚಿತ್ರ ಸನ್ನಿವೇಶವೆಂದರೆ ಜನರು ಆಲೋಚಿಸದೆ ಒಂದು ರೂಪಾಯಿ ಬೆಲೆಬಾಳುವ ವಸ್ತುವಾದರೂ ಅದನ್ನು ಐವತ್ತು ಪೈಸೆಗೆ ಮುಲಾಜಿಲ್ಲದೆ ಇಳಿಸಿಯೇ ಬಿಡುತ್ತಾರೆ. ಹಾಸ್ಯಾಸ್ಪದವೆಂದರೆ ಭಾರತ ಕೂಡ ಚೌಕಾಸಿ. ಯಾಕೆಂದರೆ, ಭಾರತ ವಿಶಾಲವಾದ ದೇಶವಾದರೂ ಪಾರ್ಕಿಂಗ್‌ ಜಗತ್ತಿನಲ್ಲಿ ನಿಂತಾಗ ಹಾಗನಿಸುವುದಿಲ್ಲ.

– ಪ್ರಾಣೇಶ್‌
ಸಹ್ಯಾದ್ರಿ ಕಾಲೇಜ್‌ ಆಫ್ ಇಂಜಿನಿಯರಿಂಗ್‌, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next