ಕೆಲವೊಮ್ಮೆ ನಮ್ಮ ಮನಸಿನಲ್ಲಿ ಉತ್ತರ ಸಿಗದ ಹಲವು ಪ್ರಶ್ನೆಗಳು ಮೂಡುತ್ತದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋಗುತ್ತೇವೆ. ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಾಹಸಕ್ಕೆ ನಾವು ಹೋಗುವುದಿಲ್ಲ. “ಜೀವನದ ಬಗ್ಗೆ ಭಯ ಉಂಟಾಗುತ್ತದೆ, ಗೊಂದಲ ಆರಂಭವಾಗಿದೆ’ ಈ ರೀತಿಯ ಮಾತುಗಳನ್ನು ಒಂದಿಲ್ಲೊಂದು ಸಂದರ್ಭದಲ್ಲಿ ಯಾರದಾದರೂ ಬಾಯಿಯಿಂದ ಕೇಳಿರುತ್ತೇವೆ. ನಾವೇ ಕೆಲವೊಮ್ಮೆ ಹೇಳಿರುತ್ತೇವೆ. ಈ ಸಂದರ್ಭ ನಮ್ಮ ಮನದಲ್ಲಿ ಒಂದು ಪ್ರಶ್ನೆ ಮೂಡುತ್ತದೆ. “ಜೀವನ ‘ ಅಂದರೆ ಏನು? ಅದೊಂದು ಉತ್ತರ ಸಿಗದ ಪ್ರಶ್ನೆ. ಉತ್ತರ ಹುಡುಕುವ ಹುಮ್ಮಸ್ಸಿನಲ್ಲಿ ಯಾರ ಬಳಿಯಾದರು ಕೇಳಿದರೆ, ಅವರದೇ ಒಂದಷ್ಟು ವ್ಯಾಖ್ಯಾನ, ಮತ್ತಷ್ಟು ಗೊಂದಲ.
ಹಾಗಾದರೆ ನಿಜವಾಗಿಯೂ ಜೀವನ ಅಂದರೆ ಏನು? ಅದೊಂದು ಉತ್ತರ ಸಿಗದ ಪ್ರಶ್ನೆ. ನಮ್ಮ ಉಸಿರು ನಿಲ್ಲೋ ತನಕ ಮುಗಿಯದ ಪಯಣ. ಸ್ಕ್ರಿಪ್ಟ್ ಇಲ್ಲದೇ ದೇವರೇ ನಿರ್ದೇಶಿಸುವ ಅದ್ಭುತ ಸಿನೆಮಾ. ನೋವು-ನಲಿವು, ಹತಾಶೆ, ಉತ್ಸಾಹ, ಪ್ರೀತಿ, ದ್ವೇಷ, ಅಸೂಯೆ ಎನ್ನುವ ಎಲ್ಲ ಪಾತ್ರಗಳ ಸಂಗಮ. ಜೀವನ ಅನ್ನುವ ಪಯಣ ನಮ್ಮಿಂದ ಹುಡುಕಲು ಅಸಾಧ್ಯವಾದ ಹಾದಿ.
ಇದನ್ನೂ ಓದಿ: ವೀರ ಪಥ: ನುರಾನಂಗ್‌ನ ವೀರ ಮಣಿ
ಇಲ್ಲಿ ಎಲ್ಲ ರೀತಿಯ ವ್ಯಕ್ತಿಗಳ ಪರಿಚಯವಾಗುತ್ತದೆ. ಒಳ್ಳೆಯತನ, ಕೆಟ್ಟತನಗಳ ಅರಿವಾಗುತ್ತದೆ. ಒಮ್ಮೊಮ್ಮೆ ನಾವು ಅತ್ಯುತ್ಸಾಹಿಗಳಾಗಿ ಬಿಡುತ್ತೇವೆ. ಇನ್ನೊಮ್ಮೆ ನಿರುತ್ಸಾಹಿಗಳಾಗಿ ಬಿಡುತ್ತೇವೆ. ಆಶಾವಾದಿ, ನಿರಾಶವಾದಿಯಾಗುತ್ತೇವೆ. ಹೀಗೆ ನಮ್ಮ ಎಲ್ಲ ಮುಖಗಳ ಒಟ್ಟು ಸಂಗಮ ಜೀವನ. ಕೆಲವೊಮ್ಮೆ ಹಿಂದಿನ ಬಾರಿ ಅತ್ತ ಕಾರಣ ನೆನಪಿಸಿಕೊಂಡಾಗ ನಗುತ್ತೇವೆ. ಕೆಲವೊಮ್ಮೆ ನಕ್ಕಿದ ಕಾರಣ ನೆನಪಿಸಿಕೊಂಡಾಗ ಅಳುತ್ತೇವೆ. ಇಷ್ಟೇ ಜೀವನ. ಆದರೆ ಅವೆಲ್ಲವೂ ಸ್ವಾರಸ್ಯದ ಸಾರದಲ್ಲಿ ಸಾಗುತ್ತಿರುತ್ತದೆ. ಆದರೆ ಈ ಮಧ್ಯೆ ಭಾವನೆಗಳ ತಲ್ಲಣಕ್ಕೆ ಶರಣಾಗಿ ಬಿಡುತ್ತೇವೆ. ಯಾರಾದರೂ ಅವಮಾನ ಮಾಡಿದಾಗ ಬೇಸರ ಮಾಡಿಕೊಳ್ಳುತ್ತೇವೆ. ಕ್ಷಣಿಕ ಕಾಲದ ಕೋಪದಲ್ಲಿ, ನಮ್ಮೆಲ್ಲ ಎಲ್ಲೆಗಳನ್ನು ಮೀರಿ ಮಾಡಬಾರದ ಕೆಲಸ ಮಾಡಿ ಬಿಡುತ್ತೇವೆ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ. ಕೋಪ, ದುಡುಕಿನ ನಿರ್ಧಾರಗಳೇ ನಮ್ಮ ಜೀವನದ ಶತ್ರುವಾಗಿ ಪರಿಣಮಿಸುತ್ತದೆ.
ಹೀಗೊಮ್ಮೆ ಕೋಪದ ಧಾವಂತಕ್ಕೆ ಬಿದ್ದವರು, ಕೆಟ್ಟ ನಿರ್ಧಾರ ಮಾಡುವ ಮುನ್ನ, ದೇವರು ಕೊಟ್ಟ ಜೀವನವನ್ನು ನಾವು ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಒಮ್ಮೆ ಯೋಚಿಸಿದರೆ, ವಾಸ್ತವದ ಅರಿವಾಗುತ್ತದೆ. ಕೋಪದ ಬದಲು ಅದನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕು. ಅವಮಾನಿಸಿದವರು ಹುಬ್ಬೇರುವ ಹಾಗೆ ನಾವು ಸಾಧಿಸಬೇಕು. ಅವರ ಅವಮಾನದ ಮಾತುಗಳಿಗೆ ನಮ್ಮ ಸಾಧನೆ ಪ್ರತ್ಯುತ್ತರ ಆಗಬೇಕು. ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಲ್ಲ. ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡುವುದು ಜೀವನ. ಕಲ್ಪನಾ ಜಗತ್ತಿಗಿಂತ ಹೆಚ್ಚಾಗಿ ವಾಸ್ತವ ಜಗತ್ತಿನ ಜತೆ ಹೆಜ್ಜೆ ಹಾಕುವ ಜೀವನ ನಮ್ಮದಾಗಿರಲಿ.
ಇದನ್ನೂ ಓದಿ: ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…
ಯಾವುದಾದರೂ ಸ್ಥಳಕ್ಕೆ ಹೋಗುವಾಗ ದುರ್ಗಮ ಹಾದಿ ಎನ್ನುವ ಕಾರಣಕ್ಕೆ ನಾವು ಆ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಕಷ್ಟವಾದರೂ ತಲುಪುವ ಊರನ್ನು ತಲುಪುತ್ತೇವೆ, ಅದರಂತೆ ಜೀವನ. ಹಿಂದೆ ಸರಿಯುವುದು ತಪ್ಪು. ಜೀವನ ಎನ್ನುವ ಪಯಣದಲ್ಲಿ ಕಷ್ಟವಾದರೂ ತಲುಪುವ ಹಾದಿ ತಲುಪಬೇಕು. ಹಿಂದೇಟು ಹಾಕಬಾರದು.
ನವ್ಯಶ್ರೀ ಶೆಟ್ಟಿ
ಎಂಜಿಎಂ ಕಾಲೇಜು ಉಡುಪಿ