ಹೃದಯಸ್ಪರ್ಶಿ ವಾಗ್ಮಿ ಡಾ. ಗುರುರಾಜ ಕರಜಗಿ ಅವರು ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘವು ಶಿರಸಿಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾಡಿದ ಭಾಷಣದ ಆಯ್ದ ಭಾಗವಿದು…
ಮನುಷ್ಯನಿಗೆ ತೀವ್ರ ಅಪೇಕ್ಷೆ ಇರೋದು ಎರಡು: “ನಾನು ಯಾವತ್ತೂ ಸಾಯಬಾರದು’; “ಹಾಗೇನಾದರೂ ಸತ್ತರೆ, ಸಂತೋಷದಿಂದಲೇ ಸಾವನ್ನಪ್ಪಬೇಕು’ - ಅಂತ. ಕೆಲವರು ಆಗಾಗ್ಗೆ “ಯಾಕ್ರೀ ಈ ಜನ್ಮ? ಸಾವಾದರೂ ಬರಬಾರದೇ?’ ಎನ್ನುತ್ತಾರೆ. ಆದರೆ, ಸಾವು ಎದುರಿಗೆ ಬಂದಾಗ ಮನುಷ್ಯ ತನಗೆ ಅರಿವಿಲ್ಲದೆ ಹಿಂದಕ್ಕೆ ಹೆಜ್ಜೆ ಇಡುತ್ತಾನೆ. ಒಂದೂರಿನಲ್ಲಿ ಒಬ್ಬ ಹಣ್ಣು ಹಣ್ಣು ಮುದುಕನಿದ್ದ. ಕೈಹಿಡಿದ ಹೆಂಡತಿ, ಈ ಲೋಕದಿಂದ ಯಾವತ್ತೋ ಎದ್ದು ನಡೆದಿದ್ದಾಳೆ.
ಮಗನೂ ಸತ್ತು ಹೋಗಿದ್ದಾನೆ. ಸೊಸೆ, ಮೊಮ್ಮಕ್ಕ ಳನ್ನು ಸಾಕುವ ಹೊಣೆ ಈ ಮುದುಕನದ್ದು. ಒಪ್ಪೊತ್ತಿನ ಊಟಕ್ಕಾಗಿ ಆತ ರಟ್ಟೆ ಮುರಿದು ದುಡಿ ದರೇನೇ, ರಾತ್ರಿಯ ನಿದ್ದೆ, ಕಣ್ಣಿಗೆ ಇಳಿಯುತ್ತಿತ್ತು. ಅಂಥವನು, ಕಟ್ಟಿಗೆ ತರಲೆಂದು ಕಾಡಿಗೆ ಹೋದ. ಒಂದಷ್ಟು ಒಣ ಕಟ್ಟಿಗೆಗಳನ್ನು ಕಲೆಹಾಕಿ, ಹೊರೆ ಮಾಡಿಕೊಂಡ. ಆ ಹೊರೆ ಬಹಳ ತೂಕವಿತ್ತು. ಅದನ್ನು ಹೊತ್ತುಕೊಳ್ಳಲು ಇನ್ನೊಬ್ಬರ ಸಹಕಾರ ಬೇಕು. ಆದರೆ, ಅಲ್ಲಿ ಯಾರೂ ಇರಲಿಲ್ಲ. ಕಟ್ಟಿಗೆ ಒಯ್ಯದಿದ್ದರೆ, ಪುಡಿಗಾಸೂ ಸಿಗದು. ಹಣವಿಲ್ಲದಿದ್ದರೆ, ಮನೆಯಲ್ಲಿ ತನ್ನ ದಾರಿಯನ್ನೇ ಕಾಯುತ್ತಿರುವ ಮಂದಿಗೆ ಊಟವೂ ಇಲ್ಲ.
ಇದನ್ನೆಲ್ಲ ನೆನೆದು, ಆತ ಇನ್ನಷ್ಟು ದುಃಖೀತನಾದ. “ಈ ಕಷ್ಟ ಅನುಭವಿಸುತ್ತಾ, ಎಷ್ಟು ದಿನ ಬದುಕಿರಲಿ? ನನ್ನ ಜೀವವಾದರೂ ಹೋಗಬಾರದೇ? ಎಲ್ಲಿದ್ದೀಯ ಯಮ, ಬೇಗ ಬರಬಾರದೇ?’ ಎಂದು ಬೇಸರದಿಂದ ಹೇಳಿದ. ಭೂಲೋಕದಲ್ಲಿ ತನ್ನನ್ನು ಒಬ್ಬ ಕರೆದನಲ್ಲ ಎಂದುಕೊಂಡು, ಯಮ ಧುತ್ತನೆ ಪ್ರತ್ಯಕ್ಷಗೊಂಡ. ಮಬ್ಬುಗಣ್ಣಿನೆದುರು ದೊಡ್ಡದಾಗಿ ನಿಂತ ಆಕೃತಿಯನ್ನು ಕಂಡು ಈ ಮುದುಕನಿಗೆ ಅಚ್ಚರಿ. “ನೀನ್ಯಾರು?’ ಎಂದು ಕೇಳಿದ.
ಅದಕ್ಕೆ ಯಮರಾಜ, “ಯಮ ಎಂದು ಕರೆದಿದ್ದು ನೀನೇ ಅಲ್ಲವೇ? ಅದಕ್ಕೇ ನಾನು ಬಂದೆ’ ಎಂದ. “ಅಯ್ಯೋ, ನನಗೇನೋ ಅರಳು ಮರಳು. ನಾನು ಕರೆದಿದ್ದನ್ನು ಕೇಳಿ, ಬಂದೆಯಾ? ಸುಮ್ಮನೆ ಕರೆದಿದ್ದಕ್ಕೆ, ನೀನು ಬಂದುಬಿಡೋದಾ? ಸರಿ, ಬರೋದು ಬಂದೆಯಲ್ಲ, ಈ ಕಟ್ಟಿಗೆ ಹೊರೆಯನ್ನು ನೆಗ್ಗಿ ಹೋಗು’ ಎಂದ ಮುದುಕ. ಅಂದರೆ, ಸಾವೇ ಬಳಿ ಬಂದರೂ, ಆ ಸಾವು ಯಾರಿಗೂ ಬೇಡ. ಜೀವಕ್ಕಿಂತ ದೊಡ್ಡ ಉಡುಗೊರೆ ಬೇರೆ ಇಲ್ಲ.