ಈ ಜಗದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮನಸ್ಸುಗಳು ವಿರಳ. ಪ್ರತಿಯೊಬ್ಬರ ಬದುಕಲ್ಲೂ ನೋವು-ನಲಿವು ಇದ್ದೇ ಇರುತ್ತದೆ. ಕಷ್ಟಗಳು ಬಂತೆಂದು ದುಃಖೀಸುತ್ತ ಕೂರುವುದು ಸರಿಯಲ್ಲ. ಕಷ್ಟಗಳನ್ನು ಎದುರಿಸುವ ಛಲ, ಹಠ, ತಾಳ್ಮೆ ನಮ್ಮಲ್ಲಿರಬೇಕು. ಕಷ್ಟದಲ್ಲೂ ನಗುತ್ತ, ಭವಿಷ್ಯದ ಕುರಿತು ಕನಸು ಕಾಣುತ್ತಾ, ಕತ್ತಲಾದ ಮೇಲೆ ಸೂರ್ಯನ ಹೊಂಬೆಳಕು ಬಂದೇ ಬರುವುದು ಎಂದು ಕಾಯುತ್ತಾ ಆಶಾವಾದಿಗಳಾಗಿ ಧೈರ್ಯದಿಂದ ಮುನ್ನಡೆಯುವವರೇ ನಿಜವಾದ ಸಾಧಕರು.
ಬದುಕಿನಲ್ಲಿ ನಮಗೆ ಕಷ್ಟಗಳನ್ನು ತಂದೊಡ್ಡಿದವರನ್ನು ದ್ವೇಷಿಸುತ್ತ, ದೂರುವುದಕ್ಕಿಂತ ಧನಾತ್ಮಕ ರೀತಿಯಲ್ಲಿ “ನಮಗೆ ಅವರು ಕಷ್ಟಗಳನ್ನೆದುರಿಸುವುದನ್ನು ಕಲಿಸಿ ಶಕ್ತರನ್ನಾಗಿಸಿದರು’ ಎಂದು ಯೋಚಿಸಲು ಕಲಿಯಬೇಕು. ನಮ್ಮ ಇಂದಿನ ಯೋಚನೆಗಳೇ ಮುಂದಿನ ಭವಿಷ್ಯಕ್ಕೆ ದಾರಿದೀಪ. ಜೀವನದಲ್ಲಿ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುವುದರಿಂದ ಬೆಟ್ಟದಂತಹ ಕಷ್ಟಗಳು ಮರೆಯಾಗುವುದರಲ್ಲಿ ಸಂದೇಹವಿಲ್ಲ. ಈ ಸುಂದರವಾದ ಬದುಕನ್ನು ಸುಂದರವಾಗಿ ರೂಪಿಸಬೇಕಾದವರು ನಾವು. ಕಷ್ಟಗಳನ್ನು ಲೆಕ್ಕಿಸದೇ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಗೆದ್ದ ಅನೇಕ ಸಾಧಕರು ನಮ್ಮ ಮುಂದಿದ್ದಾರೆ. ಅವರನ್ನೆಲ್ಲ ಪ್ರೇರಣೆಯಾಗಿಸಿಕೊಂಡು ನೋವಲ್ಲೂ ನಗುವುದನ್ನು ಕಲಿಯೋಣ.
ಕಷ್ಟದಲ್ಲೂ ಸುಖವಿದೆ ಎಂಬುದನ್ನು ನಾವು ಅರಿತರೆ ಬದುಕೇ ಒಂದು ಬಣ್ಣದ ಚಿತ್ತಾರ. ಬದುಕೆಂಬ ಖಾಲಿ ಪುಟದಲ್ಲಿ ಬಣ್ಣದ ಕಡ್ಡಿ ಹಿಡಿದು ಬದುಕನ್ನು ರೂಪಿಸುವುದನ್ನು ಕಲಿಯಬೇಕು. ಕಷ್ಟಗಳನ್ನು ಎದುರಿಸಿ ನಗುನಗುತ್ತ ಬದುಕೆಂಬ ಸುಂದರ ಪಯಣವನ್ನು ಬಣ್ಣದ ಚಿತ್ತಾರವನ್ನಾಗಿಸೋಣ!
ಶ್ರಾವ್ಯಾ, 10ನೆಯ ತರಗತಿ,
ಸಂತ ಲಾರೆನ್ಸರ ಆಂಗ್ಲ ಮಾಧ್ಯಮ ಶಾಲೆ, ಬೋಂದೆಲ್