ಜೇವರ್ಗಿ: “ಊರಾಗಿನ ಮನಿ, ಹೊಲ್ದಾಗಿನ ಬೆಳಿ ಎಲ್ಲಾ ನೀರಾಗ ಕೊಚ್ಕೊಂಡು ಹೋಗ್ಯಾದ್, ನಾವ್ ಹ್ಯಾಂಗ್ ಬದುಕ ಮಾಡ್ಬೇಕ್ರಿ..? ನಮಗ್ ಯಾವುದಕ್ಕೂ ತೋಚಲಾಗ್ಯಾದ. ರಾಜಕೀ ಮಂದಿ ಬರ್ತಾರ ಫೋಟೋ ತೊಕ್ಕೋತ್ತಾರ ಹೋಗ್ತಾರ. ನಮ್ ಗೋಳು ಕೇಳ್ಬೇಕ್ ಯಾರು’?
ಇದು ಭೀಮಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿದ ತಾಲೂಕಿನ ಕೋಬಾಳ ಗ್ರಾಮದ ಎಲ್ಲ ರೈತರಕಣ್ಣೀರ ಕತೆ. ಇನ್ನು ತಾಲೂಕಿನ ಇಟಗಾ, ಸಿದ್ನಾಳ, ಭೋಸಗಾ.ಕೆ, ಭೋಸಗಾ.ಬಿ, ಕೋಬಾಳ, ಕೂಡಿ, ಕೋನಾಹಿಪ್ಪರಗಾ, ಹರವಾಳ, ರಾಸಣಗಿ, ಕಟ್ಟಿಸಂಗಾವಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಬೆಳೆ ಹಾಗೂ ಮನೆಗಳು ಭೀಮಾ ಅಬ್ಬರಕ್ಕೆ ಹಾನಿಗೊಂಡಿವೆ.
ಪ್ರತಿ ವರ್ಷ ಬರಗಾಲದಿಂದ ಗೋಳಾಡುತ್ತಿರುವ ಈ ಭಾಗದಲ್ಲಿ ಈ ವರ್ಷ ಮಳೆರಾಯನ ಆರ್ಭಟಒಂದೆಡೆಯಾದರೆ, ಮಹಾ ನೀರಿನ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಬೆಳೆ ಸಂಪೂರ್ಣನಾಶವಾಗಿದೆ. ಮತ್ತೂಂದೆಡೆ ಈ ಭಾಗದ ರೈತರುಸರ್ಕಾರದಿಂದ ಬೆಳೆ ಪರಿಹಾರಕ್ಕೆ ಕೈ ಚಾಚುವ ಪರಿಸ್ಥಿತಿ ಬಂದಿದೆ. ಬರಗಾಲದಲ್ಲಿ ಬಿತ್ತನೆ ಖರ್ಚಾದರೂಉಳಿಯುತ್ತಿತ್ತು. ಆದರೆ, ಪ್ರವಾಹ ಹಾಗೂ ಸತತ ಮಳೆಯಿಂದ ಕೈಗೆ ಬಂದ ಬೆಳೆ ಕೊಳೆತು ನಾಶವಾಗಿದೆ.
ಬೀಜ, ಗೊಬ್ಬರ, ಕಳೆ ಕಿಳಲು ಲಕ್ಷಾಂತರ ರೂ. ಸಾಲ ಮಾಡಿರುವ ರೈತರು ಸಂಕಷ್ಟದಲ್ಲಿ ಮುಳುಗಿದ್ದಾರೆ. ರೈತರು ಬಾಳೆ, ಕಬ್ಬು ಬೆಳೆಗಳನ್ನು ತನ್ನ ಮಕ್ಕಳಂತೆ ಬೆಳೆಸಿದ್ದರು. ಈ ಬೆಳೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದನ್ನು ಕಂಡು ಮಕ್ಕಳನ್ನು ಕಳೆದುಕೊಂಡಂತೆ ತಲೆ ಮೇಲೆ ಕೈಹೊತ್ತು ಚಿಂತೆಯಲ್ಲಿ ಮುಳುಗಿಹೋಗಿದ್ದಾರೆ. ಕಂಗಾಲಾಗಿರುವ ಜೇವರ್ಗಿ ತಾಲೂಕಿನರೈತರು ಸರ್ಕಾರದ ನೆರವಿಗೆ ಕಾದು ಕುಳಿತಿದ್ದಾರೆ.
“ರಾಜಕೀಯ ಪಕ್ಷಗಳ ಮುಖಂಡರು ಹಿಂಗ್ ಬಂದ್ರು, ಹಂಗ್ ಹೋದ್ರು. ನಿಜವಾಗಿ ತೊಂದರೆಗೆ ಒಳಗಾದ ಕುಟುಂಬಗಳ ಆರ್ಥನಾದ ಕೇಳಲಿಲ್ಲ.ಮನೆ ಕಳೆದುಕೊಂಡೀವಿ, ಬೆಳೆ ಕಳೆದುಕೊಂಡೇವಿ.ಮನೆಯಲ್ಲಿನ ಕಾಳು ಕಡಿ, ಅಲ್ಪಸ್ವಲ್ಪ ರೊಕ್ಕ, ಬಟ್ಟೆ ಎಲ್ಲವೂ ನೀರು ಪಾಲಾಗಿ ಗ್ರಾಮೀಣ ಭಾಗದ ಜನರ ಬದುಕೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ’ಎಂದು ಕೋಬಾಳ ಗ್ರಾಮದ ರೈತ ಮರೆಪ್ಪ ನಾಯ್ಕೋಡಿ ಹೇಳಿದರು.
ವಿಷ ಜಂತುಗಳ ಕಾಟ : ಜೇವರ್ಗಿ ತಾಲೂಕಿನ ಭೀಮಾ ನದಿ ಪ್ರವಾಹ ಗಣನೀಯವಾಗಿ ತಗ್ಗಿದೆ. ಆದರೂ ನದಿ ತೀರದ ಜನರಲ್ಲಿನ ಆತಂಕ ಮಾತ್ರ ಕಡಿಮೆಯಾಗಿಲ್ಲ. ಪ್ರವಾಹದಿಂದ ಮನೆಗಳನ್ನು ತೊರೆದು ಸುರಕ್ಷಿತ ತಾಣಗಳಿಗೆ ತೆರಳಿದ್ದ ಕುಟುಂಬಗಳು ಕ್ರಮೇಣ ಮರಳಿ ಗೂಡು ಸೇರುತ್ತಿವೆ. ಆದರೆ, ಕೆಸರು, ಹಾವು, ಚೇಳು, ಹುಳ, ಹುಪ್ಪಡಿಗಳ ಭಯ ಅವರಲ್ಲಿ ಆವರಿಸಿಕೊಂಡಿದೆ. ಸಂಪೂರ್ಣ ಮುಳುಗಡೆಯಾದವರು ಹೊರತುಪಡಿಸಿ ಉಳಿದ ಜನ ಕ್ರಮೇಣ ತಮ್ಮ-ತಮ್ಮ ಮನೆಗಳ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
-ವಿಜಯಕುಮಾರ ಎಸ್.ಕಲ್ಲಾ