ಸೋನೆಪತ್, ಹರಿಯಾಣ : 1996ರ ಸೋನೆಪತ್ ಬಾಂಬ್ ಬ್ಲಾಸ್ಟ್ ಕೇಸಿಗೆ ಸಂಬಂಧಪಟ್ಟು ಇಲ್ಲಿನ ನ್ಯಾಯಾಲಯವೊಂದು 75ರ ಹರೆಯದ ಅಬ್ದುಲ್ ಕರೀಮ್ ತುಂಡಾ ನಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿದೆ.
ಸೋನೆಪತ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ತುಂಡಾ ಅಪರಾಧಿ ಎಂದು ಖಚಿತವಾದ ಮರುದಿನವೇ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಾ. ಸುಶೀಲ್ ಗರ್ಗ್ ಅವರು ತುಂಡಾ ನಿಗೆ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿದರು ಎಂದು ತುಂಡಾನ ವಕೀಲ ಆಶೀಷ್ ವತ್ಸ್ ತಿಳಿಸಿದರು.
ತುಂಡಾನನ್ನು ಈಗಿನ್ನು ಗಾಜಿಯಾಬಾದ್ ನ ದಾಸ್ನಾ ಜೈಲಿನಲ್ಲಿ ಇರಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ತುಂಡಾ ವಿರುದ್ಧ ಹಲವಾರು ಕೇಸುಗಳು ವಿಚಾರಣೆ ಹಂತದಲ್ಲಿ ಬಾಕಿ ಇವೆ.
ಕಳೆದ ಸೆಪ್ಟಂಬರ್‌ನಲ್ಲಿ ನ್ಯಾಯಾಲಯ ತುಂಡಾ ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾಗ ಸೋನೆಪತ್ ಬಾಂಬ್ ಬ್ಲಾಸ್ಟ್ ನಡೆದಿದ್ದಾಗ ತಾನು ಪಾಕಿಸ್ಥಾನದಲ್ಲಿದ್ದೆ ಎಂದು ತುಂಡಾ ಹೇಳಿದ್ದ.
1996ರ ಡಿಸೆಂಬರ್‌ನಲ್ಲಿ ನಡೆದಿದ್ದ ಸೋನೆಪತ್ ಅವಳಿ ಬಾಂಬ್ ಬ್ಲಾಸ್ಟ್‌ನಲ್ಲಿ ಕನಿಷ್ಠ ಹದಿನೈದು ಮಂದಿ ಮೃತಪಟ್ಟಿದ್ದರು. ಒಂದು ಬಾಂಬ್ ಸ್ಫೋಟ ಸಿನೇಮಾ ಮಂದಿರದ ಬಳಿ ನಡೆದಿತ್ತಾದರೆ ಇನ್ನೊಂದು ಸ್ಫೋಟ ಸಿಹಿತಿಂಡಿ ಅಂಗಡಿಯೊಂದರ ಬಳಿ ನಡೆದಿತ್ತು.
ಬ್ಲಾಸ್ಟ್ ನಲ್ಲಿ ಗಾಯಗೊಂಡಿದ್ದವರೂ ಸೇರಿದಂತ ಒಟ್ಟು 43 ಸಾಕ್ಷಿದಾರರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ತುಂಡಾನನ್ನು 2013ರ ಆಗಸ್ಟ್ 16ರಂದು ಭಾರತ – ನೇಪಾಲ ಗಡಿಯ ಬನಬಾಸಾ ಎಂಬಲ್ಲಿ ಸೆರೆ ಹಿಡಿಯಲಾಗಿತ್ತು. ಈತ ಪಾಕಿಸ್ಥಾನದ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಬಾಂಬ್ ಪರಿಣತನೆಂಬ ಶಂಕೆಯೂ ಇದೆ.