ನವದೆಹಲಿ:2005ರಲ್ಲಿನ ಅಯೋಧ್ಯಾ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆಪರಾಧಿಗಳಿಗೆ ಪ್ರಯಾಗ್ ರಾಜ್ ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದ್ದು, ಒಬ್ಬ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.
2005ರ ಜುಲೈನಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ರಾಮ ಜನ್ಮಭೂಮಿಲ್ಲಿದ್ದ ದೇವಾಲಯದ ಮೇಲೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ದಾಳಿ ನಡೆಸಿತ್ತು. ಈ ಉಗ್ರರು ಅಂದು ಭಕ್ತರ ರೀತಿ ಆಗಮಿಸಿದ್ದು, ಅಯೋಧ್ಯೆಯ ಹೊರಭಾಗದಲ್ಲಿ ಜೀಪ್ ವೊಂದನ್ನು ಬಾಡಿಗೆ ಪಡೆದಿದ್ದರು.
ಜೀಪ್ ಅಯೋಧ್ಯೆಯ ಗಡಿಭಾಗದಲ್ಲಿ ಸ್ಫೋಟಿಸಿದ್ದರು. ತದನಂತರ ಉಗ್ರರು ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವ ಮೂಲಕ ಐವರು ಉಗ್ರರನ್ನು ಹೊಡೆದುರುಳಿಸಿದ್ದರು. ಪೊಲೀಸ್ ತನಿಖೆಯ ವೇಳೆ ಇನ್ನುಳಿದ ಐವರು ಉಗ್ರರನ್ನು ಬಂಧಿಸಿದ್ದರು.
ಇರ್ಫಾನ್, ಆಶಿಕ್ ಇಕ್ಬಾಲ್ ಅಲಿಯಾಸ್ ಫಾರೂಖ್, ಶಕೀಲ್ ಅಹ್ಮದ್, ಮೊಹಮ್ಮದ್ ನಸೀಂ ಮತ್ತು ಮೊಹಮ್ಮದ್ ಅಝೀಜ್ ಸೇರಿದಂತೆ ಐವರು ಉಗ್ರರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಇಂದು ತೀರ್ಪು ಪ್ರಕಟಿಸುವ ವೇಳೆ ಅಪರಾಧಿಗಳನ್ನು ಕೋರ್ಟ್ ಗೆ ಹಾಜರುಪಡಿಸಿಲ್ಲವಾಗಿತ್ತು. ಭದ್ರತೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆ ದಾಳಿ ಮೇಲಿನ ಪ್ರಕರಣದಲ್ಲಿ ಇರ್ಫಾನ್, ಅಶಿಕ್ ಇಕ್ಬಾಲ್ ಅಲಿಯಾಸ್ ಫಾರೂಖ್, ಶಕೀಲ್ ಅಹ್ಮದ್ ಮತ್ತು ಮೊಹಮ್ಮದ್ ನಸೀಂ ದೋಷಿ ಎಂದು ಆದೇಶ ನೀಡಿದ್ದು, ಇಂದು ವಿಶೇಷ ಕೋರ್ಟ್ ಜಡ್ಜ್ ದಿನೇಶ್ ಚಂದ್ರ ಅವರು ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪನ್ನು ಪ್ರಕಟಿಸಿದ್ದರು.
ಮೊಹಮ್ಮದ್ ಅಝೀಜ್ ಖುಲಾಸೆಗೊಂಡಿರುವುದಾಗಿ ವರದಿ ತಿಳಿಸಿದೆ. ಸುಮಾರು 14 ವರ್ಷಗಳ ಕಾಲ ವಿಚಾರಣೆ ನಡೆದಿದ್ದು, ಇಂದು ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.