Advertisement

ಯುವತಿಗೆ ಬಾಲಕಿಯಿಂದ ಜೀವದಾನ

08:20 PM Jun 23, 2020 | mahesh |

ಉಡುಪಿ: ಬಾರಕೂರಿನ ಚೌಳಿಕೆರೆಗೆ ಕಾರು ಉರುಳಿ ಉದ್ಯಮಿ ಸಂತೋಷ್‌ ಶೆಟ್ಟಿ ಅವರು ಮೃತಪಟ್ಟ ಘಟನೆ ರವಿವಾರ ನಡೆದಿತ್ತು. ಅವರ ಜತೆಗಿದ್ದ ಸಂಸ್ಥೆಯ ಉದ್ಯೋಗಿ ಶ್ವೇತಾ ತೀವ್ರವಾಗಿ ಅಸ್ವಸ್ಥರಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಲು ಬಾಲಕಿಯೊಬ್ಬಳು ಸಕಾಲಿಕವಾಗಿ ನೀಡಿರುವ ಪ್ರಥಮ ಚಿಕಿತ್ಸೆಯೇ ಕಾರಣ. ಬಾಲಕಿ ಚಿಕಿತ್ಸೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬ್ರಹ್ಮಾವರ ಲಿಟ್ಲರಾಕ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ನಮನಾ ಅವರು ಯುವತಿಯ ಜೀವರಕ್ಷಕಿ.  ಎನ್ನೆಸ್ಸೆಸ್‌ ಅಧಿಕಾರಿಯಾಗಿರುವ ಹಿರಿಯ
ಉಪನ್ಯಾಸಕಿ ಸವಿತಾ ಎರ್ಮಾಳು -ಕುಮಾರ್‌ ದಂಪತಿಯ ಪುತ್ರಿ ಈಕೆ. ಎನ್‌ಸಿಸಿ ಕೆಡೆಟ್‌ ಆಗಿರುವ ಬಾಲಕಿ ಕಲಿತ ಪ್ರಥಮ ಚಿಕಿತ್ಸೆಯ ಪಾಠ ಈಗ ಸದ್ಬಳಕೆಯಾಗಿದೆ.

Advertisement

ಇದನ್ನೂ ಓದಿ: ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು, ಇನ್ನೋರ್ವ ಮಹಿಳೆ ಗಂಭೀರ

ನಮನಾ ಮಾಡಿದ್ದಿಷ್ಟು

ಕಾರು ನೀರಿಗೆ ಬಿದ್ದ ಕೂಡಲೇ ಸ್ಥಳೀಯ ಯುವಕರು ನೀರಿಗೆ ಧುಮುಕಿ ಗಾಜು ಒಡೆಯುವ ಪ್ರಯತ್ನ ಮಾಡಿದ್ದರು. ಸೆಂಟ್ರಲ್‌ ಲಾಕ್‌ ಆಗಿದ್ದ ಕಾರಣ ಬಾಗಿಲು ತೆರೆಯಲಾಗಲಿಲ್ಲ. ಚಾಲಕ ಸಂತೋಷ್‌ ಶೆಟ್ಟಿ ಸೀಟ್‌ ಬೆಲ್ಟ್ ಧರಿಸಿದ್ದ ಕಾರಣ ಮೇಲೆತ್ತುವುದೂ ಸುಲಭಸಾಧ್ಯವಾಗಿರಲಿಲ್ಲ. ಆದ್ದರಿಂದ ಯುವತಿಯನ್ನು ಮೊದಲು ಮೇಲೆತ್ತಿದರು. ತತ್‌ಕ್ಷಣ ನಮನಾ ಅವರ ಮನಸ್ಸು ಜಾಗೃತವಾಗಿದ್ದು, ಎನ್‌ಸಿಸಿಯಲ್ಲಿ ಕಲಿತ ವಿದ್ಯೆಯನ್ನು ಪ್ರಯೋಗಿಸಿ ನೋಡೋಣ ಎಂದು ಕಾರ್ಯಾಚರಣೆಗಿಳಿದರು. ಮೊದಲಿಗೆ ಯುವತಿಯ ದೇಹ ಸೇರಿದ್ದ ನೀರನ್ನು ಹೊರತೆಗೆಯಲಾಯಿತು. ಎದೆ, ಕೈಕಾಲುಗಳನ್ನು ತಿಕ್ಕಿ ದೇಹವನ್ನು ಪುನಶ್ಚೇತನಗೊಳಿಸಲಾಯಿತು. ಸ್ಥಳೀಯರೂ ಕೈಗೂಡಿಸಿದರು. ಬಳಿಕ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಪ್ರಸ್ತುತ
ಯುವತಿ ಚೇತರಿಸಿಕೊಂಡಿದ್ದಾರೆ. ಸಂತೋಷ್‌ ಅವರನ್ನು ಕಾರಿನಿಂದ ಹೊರತಂದ ಬಳಿಕ ಅವರಿಗೂ ಇದೇ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ ಉಳಿಸಿ ಕೊಳ್ಳಲಾಗಲಿಲ್ಲ ಎನ್ನುತ್ತಾರೆ ಸ್ಥಳೀಯರು.

ವೈದ್ಯರಿಂದ ಶ್ಲಾಘನೆ
ಬಾಲಕಿ ನಮನಾ ಅವರ ಸಕಾಲಿಕ ಕ್ರಮಕ್ಕೆ ಮಣಿಪಾಲ ಆಸ್ಪತ್ರೆಯ ವೈದ್ಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಪ್ರಥಮ ಚಿಕಿತ್ಸೆ ಲಭಿಸದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.

ಹಲವರ ಶ್ರಮ
ಅಪಘಾತ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ಯುವತಿಯನ್ನು ಕೆರೆಯಿಂದ ಮೇಲೆತ್ತಿ ರಕ್ಷಣೆ ಮಾಡಿದರು. ನಾನು ನನ್ನಿಂದಾದ ಪ್ರಥಮ ಚಿಕಿತ್ಸೆ ನೀಡಿದೆ. ಯುವತಿಯ ಪ್ರಾಣ ಉಳಿಸುವಲ್ಲಿ ಎಲ್ಲರ  ಶ್ರಮವೂ ಇದೆ. ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದ ಕಾರಣ ನಾನು ಯಾವುದೇ ಅಂಜಿಕೆ ಇಲ್ಲದೆ  ಅವರೊಂದಿಗೆ ಕೈಜೋಡಿಸಿದೆ.
– ನಮನಾ, ಪ್ರಥಮ ಚಿಕಿತ್ಸೆ ನೀಡಿದ ಬಾಲಕಿ

Advertisement

ಇದನ್ನೂ ಓದಿ: ಬಾರ್ಕೂರು ಚೌಳಿಕೆರೆ ಕಾರು ಅಪಘಾತ: ಅಪಾಯವನ್ನೂ ಲೆಕ್ಕಿಸದೇ ಕೆರೆಗೆ ಧುಮುಕಿದ ಅವಳಿ ವೀರರು!

Advertisement

Udayavani is now on Telegram. Click here to join our channel and stay updated with the latest news.

Next