ಚಿತ್ತಾಪುರ: ಪೊಲೀಸರ ಹೆದರಿಕೆಗೆ ಹೆಲ್ಮೇಟ್ ಹಾಕಿಕೊಳ್ಳುವ ಬದಲು ಹೆಲ್ಮೇಟ್ ಹಾಕಿಕೊಳ್ಳುವುದರಿಂದ ತಮ್ಮ ಜೀವದ ರಕ್ಷಣೆ ಮಾಡಿಕೊಂಡಂತಾಗುತ್ತದೆ ಎಂಬ ಮನೋಭಾವ ಬೈಕ್ ಸವಾರರಲ್ಲಿ ಮೂಡಬೇಕು. ಅಂದಾಗ ಮಾತ್ರ ಎಲ್ಲ ಸವಾರರು ಹೆಲ್ಮೇಟ್ ಬಳಸಲು ಸಾಧ್ಯ ಎಂದು ಸಿಪಿಐ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಬಜಾಜ್ ಕಾಂಪ್ಲೆಕ್ಸನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಲ್ಮೇಟ್ ಹಾಕಿಕೊಂಡಾಗ ಅಪಘಾತವಾದಾಗ ಜೀವ ಹಾನಿಯಾಗದೆ.
ಜೀವ ಉಳಿದಿರುವ ಹಾಗೂ ಹೆಲ್ಮೇಟ್ ಹಾಕಿಕೊಳ್ಳದ ಸವಾರರಿಗೆ ಅಪಘಾತವಾಗಿ ಸ್ಥಳದಲ್ಲೆ ಜೀವ ಹಾನಿಯಾಗಿರುವ ಘಟನೆಗಳು ಪ್ರಸ್ತುತ ದಿನಗಳಲ್ಲಿ ನಡೆದಿವೆ. ಇವುಗಳನ್ನು ನೋಡಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜೀವ ರಕ್ಷಣೆಗೆ ಹೆಲ್ಮೇಟ್ ಬೇಕೆಬೇಕು. ಹೆಲ್ಮೇಟ್ ಧರಿಸಿ ಜೀವ ರಕ್ಷಣೆ ಮಾಡಿ ಹಾಗೆಯೇ ನಿಯಮ ಪಾಲನೆ ಮಾಡಿ ಎಂದು ಹೇಳಿದರು.
ಕುಡಿದು ವಾಹನ ಚಲಾಯಿಸಬಾರದು. ಅಪಘಾತವಾಗಿ ಜೀವ ಕಳೆದುಕೊಳ್ಳಬಹುದು. ಪಟ್ಟಣದಲ್ಲಿ ಇನ್ನು ಮುಂದೆ ರಾತ್ರಿ 8:00ರ ನಂತರ ಸಂಚರಿಸುವ ವಾಹನ ಸವಾರಿಗೆ ಆಲ್ಕೋ ಮೀಟರ್ ಮೂಲಕ ಪರೀಕ್ಷೆ ಮಾಡಲಾಗುವುದು. ವಾಹನ ಚಲಿಸುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಇದು ನಿಮ್ಮ ಸುರಕ್ಷತೆ ನೀಡುತ್ತದೆ. ಅಪರಿಚಿತರೊಂದಿಗೆ ಎಚ್ಚರವಿರಬೇಕು ಎಂದು ಅವರು ಹೇಳಿದರು.
ಪಿಎಸ್‌ಐ ಜಗದೇವಪ್ಪ ಪಾಳಾ ಮಾತನಾಡಿ, ನಿಯಮಗಳು ಇರುವುದು ಜನರ ಒಳ್ಳೆಯದಕ್ಕೆ ಹೊರತು ಕೆಟ್ಟದಕ್ಕಲ್ಲ. ವಾಹನದ ವೇಗದ ಮಿತಿ ಕಡಿಮೆ ಇದ್ದರೆ ಅಪಘಾತವಾದರೂ ಯಾವುದೇ ಹಾನಿಯಾಗಲ್ಲ. ಹೀಗಾಗಿ ಅತಿಯಾದ ವೇಗ ಸರಿಯಲ್ಲ ಎಂದು ಸವಾರರಿಗೆ ಕಿವಿಮಾತು ಹೇಳಿದರು.
ಅಪರಾಧ ತಡೆಯಲು ವಹಿಸಬಹುದಾದ ಕೆಲವು ಮುಂಜಾಗ್ರತಾ ಕ್ರಮ ಅನುಸರಿಸಿದರೆ ಅಪರಾಧ ತಡೆಯಲು ಸಾಧ್ಯವಾಗುತ್ತದೆ. ಒಂದು ತಿಂಗಳ ಕಾಲ ಅಪರಾಧ ತಡೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥರೆಡ್ಡಿ ದ್ಘಾಟಿಸಿದರು. ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ರಾಮದಾಸ ಚವ್ಹಾಣ, ತಾಪಂ ಸದಸ್ಯ ರವಿ ಪಡ್ಲ, ಮುಖಂಡ ಚಂದ್ರಶೇಖರ ಪಾಟೀಲ ಮಲಕೂಡ, ಚನ್ನವೀರ ಕಣಗಿ, ಜಗದೀಶ ಚವ್ಹಾಣ ಮಾತನಾಡಿದರು. ಪುರಸಭೆ ಸದಸ್ಯ ದಶರಥ ದೊಡ್ಮನಿ, ಕೋಟೇಶ್ವರ ರೇಷ್ಮಿ, ಶಂಕರ ಚವ್ಹಾಣ, ಅಶ್ವಥರಾಮ ರಾಠೊಡ, ಮಲ್ಲಿಕಾರ್ಜುನ ಬೆಣ್ಣೂರ, ಕರಣಕುಮಾರ ಅಲ್ಲೂರ, ಮಲ್ಲಿಕಾರ್ಜುನ ಪೂಜಾರಿ ಇದ್ದರು. ಮಲ್ಲಿಕಾರ್ಜುನ ಉಕ್ಲಿ ನಿರೂಪಿಸಿ, ವಂದಿಸಿದರು.