Advertisement

ಬದುಕು ಬದಲಿಸುವ ಮರದ ಕೆತ್ತನೆ

07:23 AM Mar 14, 2019 | |

ಕಾಲ ಬದಲಾದಂತೆ ಮನುಷ್ಯ ತನ್ನ ಸೌಂದರ್ಯಕ್ಕೆ ಮಾತ್ರವಲ್ಲದೆ ತನ್ನ ಸುತ್ತಮುತ್ತಲಿನ ಪರಿಸರ, ಮನೆ ಮುಂತಾದವುಗಳ ಅಂದ ಚೆಂದಕ್ಕೂ ಮಹತ್ವ ನೀಡುತ್ತಿದ್ದಾನೆ. ಈ ಕಾರಣದಿಂದಲೇ ಇಂದು ಹಲವು ಉದ್ಯಮಗಳು ಅಭಿವೃದ್ಧಿಯ ಹಾದಿ ಹಿಡಿದಿದ್ದು, ಇವುಗಳಲ್ಲಿ ಪೀಠೊಪಕರಣ, ಮನೆಯ ಒಳಾಂಗಣ ವಿನ್ಯಾಸಗೊಳಿಸುವ ಉದ್ಯಮವೂ ಒಂದು.  ಹಲವು ಬಗೆಯ ಪೀಠೊಪಕರಣ, ಮನೆಯ ಒಳಾಂಗಣ ವಿನ್ಯಾಸಕ್ಕೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿರುವ ಕಾರಣ ಕೆಲಸಗಾರರ ಬೇಡಿಕೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

Advertisement

ಶಿಕ್ಷಣ
ಈ ಕೆಲಸ ಮಾಡಲು ಯಾವುದೇ ನಿರ್ದಿಷ್ಟವಾದ ಶಿಕ್ಷಣ ಬೇಕಿಲ್ಲ. ಕೆಲಸದ ಕೌಶಲ ಗೊತ್ತಿರುವವರು ಇದನ್ನು ನಿರ್ವಹಿಸಬಹುದು. ಸಾಮಾನ್ಯವಾಗಿ ಕುಲ ಕಸುಬಾಗಿ ಈ ಕೆಲಸ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ ವಿಷಯಕ್ಕೆ ಸಂಬಂಧಿಸಿ ಕೆಲ ಕೋರ್ಸ್‌ಗಳು ಆರಂಭಗೊಂಡಿವೆ. ಎಸೆಸೆಲ್ಸಿ ಬಳಿಕ ಡಿಪ್ಲೊಮಾ ಕೋರ್ಸ್‌ಗಳನ್ನು ಕೆಲ ಸಂಸ್ಥೆಗಳು ನೀಡುತ್ತಿವೆ. ಡಿಗ್ರಿ ಬಳಿಕವೂ ಹಲವು ವಿಧದ ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ.

ಬೇಕಿರುವ ಕೌಶಲಗಳು
ಮರಕೆಲಸಗಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಕೆಲಸಗಾರರಿಗೆ ಏಕಾಗ್ರತೆ ಅತ್ಯಂತ ಮುಖ್ಯವಾಗುತ್ತದೆ. ಹೊಸ ಹೊಸ ವಿನ್ಯಾಸಗಳನ್ನು ಮರದಲ್ಲಿ ಕೆತ್ತಬಹುದಾದ ಸೃಜನಶೀಲತೆ, ವಿನ್ಯಾಸಗಳ ಜ್ಞಾನ ಇರಬೇಕಾಗುತ್ತದೆ. ಉತ್ತಮ ಸಂವಹನ ಕೌಶಲವಿದ್ದಲ್ಲಿ ಗಿರಾಕಿಗಳೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಬಹುದು. ಕಂಪೆನಿಗಳಲ್ಲದೆ ಮರಕೆಲಸ ಉದ್ಯಮಗಳನ್ನು ನಿರ್ವಹಿಸುತ್ತಿರುವವರಿಗೆ ವ್ಯಾಪಾರ, ಮಾರುಕಟ್ಟೆ ಮತ್ತು ನೆಟ್‌ವರ್ಕ್‌ಗಳ ಮಾಹಿತಿ ಅಗತ್ಯ. ಪೀಠೊಪಕರಣಗಳ ತಯಾರಿಕೆಯಲ್ಲಿ ಅಳತೆಗಳು ಪ್ರಮುಖ ಪಾತ್ರ ನಿರ್ವಹಿಸುವುದರಿಂದ ಗಣಿತದ ಜ್ಞಾನವೂ ಬೇಕು.

ಸಂಬಳ ಆದಾಯ
ಯುಎಸ್‌ ಬ್ಯೂರೋ ಆಫ್ ಲೇಬರ್‌ ಸ್ಟಾಟಿಸ್ಟಿಕ್ಸ್‌ ಪ್ರಕಾರ 2016- 2026ರ ವೇಳೆಯಲ್ಲಿ ಮರಗೆಲಸಗಾರರ ಪ್ರಮಾಣ ಶೇ. 8ರಷ್ಟು ಏರಿಕೆ ಕಾಣಲಿದ್ದು, ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಾಣಲಿದೆ. 2017ರ ಮೇ ವೇಳೆಯಲ್ಲಿ ಮರಗೆಲಸಗಾರನೊಬ್ಬರ ಸಾಮಾನ್ಯ ತಿಂಗಳ ಆದಾಯ 50 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ಇದೆ. ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಇವರ ಆದಾಯ ದುಪ್ಪಟ್ಟಿದ್ದು, ಯು.ಎಸ್‌.ನಲ್ಲಿ 45,170 ಡಾಲರ್‌ ಗಳಷ್ಟಿವೆ. ಸ್ವಂತ ಉದ್ಯಮ ನಡೆಸುವವರಿಗೆ ಲಭ್ಯ ಕೆಲಸದ ಆಧಾರದಲ್ಲಿ ಆದಾಯದ ಪ್ರಮಾಣ ನಿರ್ಧಾರವಾಗುತ್ತದೆ.

ಪಾರ್ಟ್‌ಟೈಮ್‌ ಉದ್ಯೋಗ
ಈ ಕೆಲಸ ನಿರ್ವಹಿಸಲು ದಿನದ ಪೂರ್ತಿ ಸಮಯವನ್ನೂ ವಿನಿಯೋಗಿಸಬೇಕು ಎಂದೇನಿಲ್ಲ. ಬೇರೆ ಉದ್ಯೋಗ, ಶಿಕ್ಷಣದ ಜತೆ ಜತೆಯಾಗಿ ಈ ಕೆಲಸ ಮಾಡಬಹುದು. ಸಾಮಾನ್ಯವಾಗಿ ಕಂಪೆನಿಗಳಲ್ಲಿ ಅರೆಕಾಲಿಕ ಉದ್ಯೋಗಿಗಳ ನೇಮಕ ಕಡಿಮೆಯಾಗಿದ್ದರೂ ಸ್ವಂತ ಉದ್ಯಮವಾಗಿ ಕೆಲಸ ಮಾಡುವವರಿಗೆ ಈ ಆಯ್ಕೆ ಇದೆ. 

Advertisement

ಪ್ರೀತಿ ಭಟ್‌ ಗುಣವಂತೆ 

Advertisement

Udayavani is now on Telegram. Click here to join our channel and stay updated with the latest news.

Next