ವಿಜ್ಞಾನದ ಕಲಿಕೆಗೆ ಜೀವನ ಮುಡಿಪಾಗಿಟ್ಟು ಡಿಗ್ರಿಗೆ ಬಂದಾಗ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನ ಕಾಲೇಜು ಕಡ್ಡಾಯ ಮಾಡಿದಾಗ ಇರುವ ಏಕೈಕ ದಾರಿ ವಿಜ್ಞಾನ ಸಂಘ. ನಾನೂ ವಿಜ್ಞಾನ ಸಂಘ ಸೇರಿದ್ದೆ. ಸದಾ ದ್ವಂದ್ವದಲ್ಲಿ ಮುಳುಗೇಳುತ್ತಿರುವ ನನ್ನಂತಹ ಚಂಚಲಿಗರಿಗೆಂದೇ ನನ್ನ ಕಾಲೇಜ್ ಒಂದು ವಾರದೊಳಗೆ ಸೇರಿರುವ ಸಂಘ ಬದಲಿಸುವ ಅವಕಾಶ ಒದಗಿಸಿತ್ತು. ಎನ್‌ಎಸ್‌ಎಸ್‌ನ ಸರ್‌ಗೆ ನನ್ನ ಹಾಗೂ ನನ್ನ ಗೆಳತಿಯರ ಹುಚ್ಚಿನ ಬಗ್ಗೆ ಗೊತ್ತಿದ್ದುದರಿಂದ ಎನ್‌ಎಸ್‌ಎಸ್‌ಗೆ ಬನ್ನಿ ಅಂತ ಆಹ್ವಾನ ಕೊಟ್ಟರು. ಪ್ರತಿಯೊಬ್ಬರ ಬದುಕಿನಲ್ಲಿಯೂ ಟರ್ನಿಂಗ್ ಪಾಯಿಂಟ್ ಅನ್ನುವುದೊಂದು ಇರುತ್ತದಂತೆ. ಅದು ಎದುರಾದಾಗ ಆ ಗಳಿಗೆಗೆ ಅದು ಟರ್ನಿಂಗ್ ಪಾಯಿಂಟ್ ಅಂತ ಗೊತ್ತಿರುವುದಿಲ್ಲ. ಎಷ್ಟೋ ಸಮಯದ ಮೇಲೆ ಹಿಂತಿರುಗಿ ನೋಡಿದಾಗ ಆ ಟರ್ನಿಂಗ್ ಪಾಯಿಂಟನ್ನು ಗುರುತಿಸಲು ಸಾಧ್ಯವಾಗುತ್ತದೆ. ವಿಜ್ಞಾನದ ಗಂಭೀರ ಮುಖಭಾವದ ಉಪನ್ಯಾಸಕರಿಂದ ತಪ್ಪಿಸಿಕೊಳ್ಳಲು ಎನ್‌ಎಸ್‌ಎಸ್ ಸೇರಿದ್ದು, ಆದರೆ ಬದುಕನ್ನು ಪ್ರೀತಿಸುವ, ಬದುಕನ್ನು ಅರ್ಥೈಸುವ, ಬದುಕನ್ನು ಲ್ಯಾಬ್‌ನಿಂದ ಹೊರಗೆ ಬಂದುನೋಡುವ ಆಯ್ಕೆ ಅದು ಆಗಿತ್ತೆಂದು ಈಗ ಹೊಳೆಯುತ್ತಿದೆ. ಲ್ಯಾಬ್‌ನ ಗೋಳು ಹಾಗೂ ನೋಟ್ ಪುಸ್ತಕ ತುಂಬಾ ಕೊರೆದ ಗ್ರೀಕ್ ಅಕ್ಷರಗಳಲ್ಲೇ ತುಂಬಬಹುದಾಗಿದ್ದ ನೆನಪಿನ ಪುಟಗಳಿಗೆ ರಂಗು ತುಂಬಿದ್ದು ಎನ್‌ಎಸ್‌ಎಸ್. “ನಾನು ಎನ್‌ಎಸ್‌ಎಸ್‌ನಲ್ಲಿದ್ದಾಗ…’ ಅಂತ ಶುರುವಾಗುವ ಕಥೆಗಳೆಷ್ಟೋ!
ಬರವಣಿಗೆಯಲ್ಲಿ ಹಿಡಿತ ಇದ್ದುದರಿಂದ ಎನ್‌ಎಸ್‌ಎಸ್. ಸೇರಿದ ಮೇಲೆ ನಾನು ಬರೆದ ನಿರೂಪಣೆ, ಸ್ವಾಗತ ಭಾಷಣ, ವಂದನಾರ್ಪಣೆಗಳಿಗೆ ಲೆಕ್ಕ ಇರಲಿಕ್ಕಿಲ್ಲ. ಊರೂರು ಅಲೆದು, ಚರಂಡಿಗಿಳಿದು ಮಾಡಿದ ಸ್ವಚ್ಛತಾ ಕಾರ್ಯಗಳ ಲೆಕ್ಕವನ್ನ ಚಿತ್ರಗುಪ್ತನಾದರೂ ಮರೆತಾನು, ನಾನು ಮರೆಯಲಿಕ್ಕಿಲ್ಲ. ಎನ್‌ಎಸ್‌ಎಸ್ ಎಂದು ಆದಿತ್ಯವಾರವೂ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದುದು, ಜನ ಯಾಕೆ ಕಸ ಬೀದಿಗೆಸೆಯುತ್ತಾರೆ? ಐಸ್‌ಕ್ರೀಮ್ ತಿಂದು ರಸ್ತೆಗೆಸೆಯುತ್ತಾರೆ? ಬೇರೆ ಊರಿಂದ ಬಂದ ಕೂಲಿ ಕಾರ್ಮಿಕರು, ಭಿಕ್ಷುಕರು ನಮ್ಮ ಊರನ್ನ ಹಾಳು ಮಾಡಿದ್ದಾರೆಂದು ಅಸಹನೆ ತೋರಿಸುತ್ತೇವೆ, ನಮ್ಮ ಕಾಲೇಜು ಕ್ಯಾಂಪಸ್ಸಿನ ಮೂಲೆಮೂಲೆಗಳಲ್ಲಿ ಬಿದ್ದಿರುವ ಐಸ್ ಕ್ರೀಮ್ ಕ್ಯಾಂಡಿಯ, ಲೇಯ್ಸ-ಕುರ್‌ಕುರೆಗಳ ಪ್ಯಾಕೆಟ್‌ಗಳ ಅರ್ಥವೇನು?- ಹೀಗೆಲ್ಲ ಹಲವು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದುದು- ಈಗೆಲ್ಲ ಬರಿ ನೆನಪಷ್ಟೆ ! ಕಸ ಕಂಡಲ್ಲಿ ಹೆಕ್ಕುವ ದೊಡ್ಡ ಮನಸ್ಸಿನವರು ಎನ್‌ಎಸ್‌ಎಸ್‌ನ ವಿದ್ಯಾರ್ಥಿಗಳು.
“”ನಿಮ್ಮ ಕಸ ಹೆಕ್ಕಿಯಾದರೆ ಕಲಿಯುವ ಕಡೆಗೆ ಸ್ವಲ್ಪ ಗಮನ ಕೊಡಬಹುದ?” ಅಂತ ನಮ್ಮ ಶಿಕ್ಷಕರು ಹೇಳುವುದು ಹೆಮ್ಮೆಯಿಂದಲೋ ಕೋಪದಿಂದಲೋ ಅನ್ನುವುದು ತಿಳಿದಿಲ್ಲ. ಮನೆ ಯಲ್ಲಿಯೂ ಅಷ್ಟೆ- “”ಅವಳದ್ದೊಂದು ಇಡೀ ದಿನ ಎನ್ನೆಸ್ಸೆಸ್” ಅಂತ ಅಸಹನೆ ಕಿವಿಗೆ ಬಿದ್ದರೂ ಅದು ಎದೆಗೆ ನಾಟಿಲ್ಲ! ಎನ್‌ಎಸ್‌ಎಸ್‌ನಲ್ಲಿದ್ದ ಎರಡು ವರ್ಷಗಳಲ್ಲಿ ಮಂಗಳೂರಿನ ಹಲವು ಊರುಕೇರಿ ಬೀದಿಗಳ ಕಸ ಹೆಕ್ಕಿದ್ದಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಂದೊಂದು ದಿನ ಕಲಿತೇನು ಅನ್ನುವ ಕನಸೂ ಇಲ್ಲದ ಕಾಲದಲ್ಲಿ ಅದು ನನಗೆ ಪರಿಚಯವಾದದ್ದು ತನ್ನೊಳಗಿದ್ದ ಕಸದ ಮೂಲಕವೇ ! ಸ್ವಚ್ಛ ಗಂಗೋತ್ರಿ ಅನ್ನುವ ಕಾರ್ಯಕ್ರಮದಡಿಯಲ್ಲಿ ಅಲ್ಲಿಗೆ ಕಸ ಹೆಕ್ಕಲು ಹೋದಾಗ ಅಲ್ಲಿ ಬಿದ್ದಿದ್ದ ರಾಶಿ ರಾಶಿ ಕಸ ಕಂಡಾಗ ಭಯವಾಗಿತ್ತು. ಡಿಗ್ರಿ ಮುಗಿಸಿ ವಿಶ್ವವಿದ್ಯಾನಿಲಯ ಸೇರಿದಾಗಲೂ ಅಲ್ಲಿನ ಕಸದ ಪ್ರಮಾಣ ಕಡಿಮೆಯಾಗಿರಲಿಲ್ಲ. ಕಸ ಹಾಕುವವರೂ ಇದ್ದರು, ಹೆಕ್ಕುವವರೂ ಇದ್ದರು. ಮೂರು ತಿಂಗಳಿಗೊಮ್ಮೆ ಎಲ್ಲರೂ ಸೇರಿ ಕಸ ಹೆಕ್ಕುವಾಗ ನನಗೆ ಎನ್‌ಎಸ್‌ಎಸ್‌ನದ್ದೇ ನೆನಪಾಗುತ್ತಿತ್ತು.
ಎನ್‌ಎಸ್‌ಎಸ್ ಕಲಿಸಿದ ಪಾಠಗಳು ಒಂದೆರಡೆ? ಎಲ್ಲದಕ್ಕೂ ಹೊಂದಿಕೊಂಡು ಮನುಷ್ಯರನ್ನು ಅರ್ಥ ಮಾಡಿಕೊಂಡು ಬದುಕಲು ಕಲಿಸಿದ್ದೇ ಎನ್‌ಎಸ್‌ಎಸ್ ಕನಿಷ್ಟ ಸೌಲಭ್ಯಗಳಿರುವ ವ್ಯವಸ್ಥೆಗೆ ಒಗ್ಗಿಕೊಂಡು, ಆ ಬಗ್ಗೆ ಒಂದಿನಿತೂ ದೂರದೆ ಬದುಕಲು ಕಲಿಸಿದ್ದು ಎನ್‌ಎಸ್‌ಎಸ್ ಲ್ಯಾಬ್ ರೆಕಾರ್ಡ್‌ಗಳಾಚೆಗೂ ಒಂದು ಬದುಕಿದೆ, ಅದು ಒತ್ತಡಗಳಿಂದ ಮುಕ್ತವಾಗಿದೆ-ಅಂತ ಕಲಿಸಿದ್ದು ಎನ್‌ಎಸ್‌ಎಸ್ “”ನಮ್ಮ ದೇಶದಲ್ಲಿ ಮೈಕು ಹಿಡಿಯುವವರಿಗಿಂತ ಹಿಡಿಸೂಡಿ ಹಿಡಿಯುವವರ (ಗುಡಿಸಲು!) ಸಂಖ್ಯೆ ಹೆಚ್ಚಾಗಿರುತ್ತಿದ್ದರೆ ದೇಶ ಎಂದೋ ಉದ್ಧಾರವಾಗುತ್ತಿತ್ತು”- ಮಾತು ಕಡಿಮೆ ಮಾಡಿ ಹೆಚ್ಚು ಹೆಚ್ಚು ದುಡಿಯಲು ಪ್ರೇರೇಪಿಸಿದ್ದು ಎನ್‌ಎಸ್‌ಎಸ್ ವಾಣಿಜ್ಯ, ಕಲೆ ಅಂತ ವಿಭಾಗಗಳ, ಜ್ಯೂನಿಯರ್, ಸೀನಿಯರ್ ಅಂತ ವಯಸ್ಸಿನ ಭೇದವಿಲ್ಲದೆ ಇಡೀ ಕಾಲೇಜನ್ನೇ ಮಿತ್ರರ ಕೂಟವಾಗಿ ಪರಿವರ್ತಿಸಿದ್ದು ಎನ್‌ಎಸ್‌ಎಸ್. “”ವಿಜ್ಞಾನದ ವಿದ್ಯಾರ್ಥಿಗಳಾಗಿ ಹೀಗೆ ಸಬೆjಕ್ಟನ್ನ ನಿರ್ಲಕ್ಷಿಸಿದರೆ ಹೇಗೆ?” ಅಂತ ಉಪನ್ಯಾಸಕರು ಗರಮ್ ಆಗಿ ಬೈದದ್ದು ನೆನಪಿದೆ.
ನೂರು ಸುಳ್ಳು ಹೇಳಿ ಸಿಕ್ಕಿಬಿದ್ದು ಬೈಗುಳ ತಿಂದರೂ ಎನ್‌ಎಸ್‌ಎಸ್ ಕೆಲಸಗಳಿಗೆ ಹೋಗುತ್ತಿದ್ದುದು, ಕಲಿಯುತ್ತಿರುವ ಸಬೆjಕ್ಟ್ಗೆ ಮೋಸ ಮಾಡುತ್ತಿದ್ದೇನೆಯೆ ಎನ್ನುವ ಪಾಪಪ್ರಜ್ಞೆ ಕಾಡಿದ್ದು, ಉಪನ್ಯಾಸಕರ ಸ್ಟಾಫ್ರೂಮ್‌ನಲ್ಲಿ, ಪ್ರಯೋಗಾಲಯದಲ್ಲಿ -ಭೂಮಿಯೇ! ನನ್ನನ್ನ ಬಾಯ್ಬಿಟ್ಟು ನುಂಗಬಾರದೆ- ಅನ್ನುವಷ್ಟು ಬೈಗುಳ ತಿಂದದ್ದು, ಕಾರಣವೇ ಇಲ್ಲದೆ ಇಂಟರ್ನಲ್ಸ್‌ನಲ್ಲಿ ಅಂಕಗಳು ಕಡಿಮೆಯಾಗುತ್ತಿದ್ದುದು-ನೆನೆದಾಗ ಈಗ ನಗು ಬರುತ್ತದೆ. ವಿಜ್ಞಾನ ನೂರಕ್ಕೆ ನೂರು ಗಮನ ಹಾಗೂ ಶ್ರಮ ಬಯಸುವ ವಿಷಯ. ಎನ್‌ಎಸ್‌ಎಸ್ ಸೇರಿರುವ ವಿಜ್ಞಾನದ ವಿದ್ಯಾರ್ಥಿಗಳೆಂದರೆ ಎರಡು ದೋಣಿಯಲ್ಲಿ ಕಾಲಿಟ್ಟು ಗುರಿ ಸೇರುವ ವಿಶ್ವಾಸ ಇಟ್ಟುಕೊಂಡಿರುವ ಅದ್ವಿತೀಯರು.
ಗಣರಾಜ್ಯೋತ್ಸವದ ಸೆಲೆಕ್ಷನ್ ಕ್ಯಾಂಪ್ ಇದ್ದ ದಿನವೇ ಪರೀಕ್ಷೆ ಇದ್ದಾಗ. ಬೇಗ ಪರೀಕ್ಷೆ ಮುಗಿಸಿ ಹೋಗುವ ಭರವಸೆಯಲ್ಲಿ ನನ್ನ ಗೆಳತಿ ಎಕ್ಸಾಮ್ ಹಾಲ್ ಪ್ರವೇಶಿಸಿದ್ದಳು. ಪರೀಕ್ಷೆ ನಿಗದಿತ ಸಮಯದಲ್ಲಿ ಶುರುವಾಗುವ ಲಕ್ಷಣ ತೋರಲಿಲ್ಲ-ನನ್ನ ಹಿಂದೆ ಎಕ್ಸಾಮ್ ಹಾಲ್‌ನಲ್ಲಿ ಕೂತವಳು, “”ಇದು ಇನ್ನು ಶುರುವಾಗಿ ಮುಗಿಯುವಾಗ ಎಷ್ಟು ಹೊತ್ತಾಗುವುದೋ?-ನಾನು ಹೋಗಲಾ?” ಅಂತ ಕಿವಿಯಲ್ಲಿ ಪಿಸುಗುಟ್ಟಿದ್ದಳು. ನನಗದ್ಯಾವ ಧೈರ್ಯ ಬಂದಿತ್ತೋ?-“”ಹೋಗು” ಅಂತಂದೆ. ಇನ್ನೇನು ಐದು ನಿಮಿಷಗಳಲ್ಲಿ ಪ್ರಾರಂಭವಾಗಲಿಕ್ಕಿರುವಾಗ, ಪರೀಕ್ಷೆಯೇ ಇಲ್ಲ ಎಂಬ ರೀತಿಯಲ್ಲಿ ಎದ್ದು ಹೋದ ಆ ದೃಶ್ಯ ಯೂಟ್ಯೂಬ್‌ನಲ್ಲಿ ಸಿಗುವ ಯಾವ ಇನ್ಸಿ$³ರೇಷನ್ ವಿಡಿಯೋಗಿಂತ ಕಡಿಮೆ ಇದೆ ಹೇಳಿ! ಎನ್‌ಎಸ್‌ಎಸ್ ಹೇಗೋ ಏನೋ ಎಲ್ಲರಲ್ಲಿಯೂ ಒಂದು ರೀತಿಯ ಹುಚ್ಚು ಧೈರ್ಯ ತುಂಬುತ್ತದೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ ಖುಷಿಯ ಎದುರು, ಮಾರ್ಕ್ಸ್ಕಾರ್ಡ್‌ನಲ್ಲಿ “ಫೈಲ್’ ಎಂದು ಬಂದದ್ದು ಅವಮಾನ ಅಂತನಿಸುವುದೇ ಇಲ್ಲ. ಎಲ್ಲರೂ ಕಾಣುವ ಅದೇ ಲೋಕವನ್ನ ಬೇರೆಯೇ ಆಗಿ ನೋಡಲು ಹೊಸ ಕನ್ನಡಕ ಕೊಡುತ್ತದೆ ಎನ್‌ಎಸ್‌ಎಸ್!
“”ನೀವು ಎನ್‌ಎಸ್‌ಎಸ್ಸಾ?” ಅನ್ನುವ ಪ್ರಶ್ನೆ ಕಿವಿಗೆ ಬಿದ್ದಾಗ ಹುಟ್ಟುವ ಕಾಳಜಿ-ಗೌರವ-ಖುಷಿ ಎಷ್ಟೆಂದರೆ, “”ನೀವು ದೇವಲೋಕದವರಾ?” ಅಂತ ಕೇಳಿದ ಹಾಗಾಗುತ್ತದೆ. ಹೊಸಬರು ಎನ್‌ಎಸ್‌ಎಸ್ ಸೇರುತ್ತಿದ್ದಾರೆ- ಹಿಂದೊಮ್ಮೆ ನಾವು ಆಳಿದ್ದ ಸಾಮ್ರಾಜ್ಯ ಈಗ ಅವರದ್ದಾಗುವಾಗ ಅಸೂಯೆ ಹುಟ್ಟುತ್ತದೆ. ಆದರೂ ಒಂದುಂಟು-ಜನ ಬದಲಾದರೂ “ಆಗಸವ ಕಡ ತಂದು ನೆಲಕೆ ಹಾಸಿ ಕುಳಿತು ಹಬ್ಬದೂಟ ಮಾಡುವ’ ಉತ್ಸಾಹ ಮಾತ್ರ ಇನ್ನೂ ಬದಲಾಗಿಲ್ಲ.
ಯಶಸ್ವಿನಿ ಕದ್ರಿ