Advertisement

ತನ್ನಂತೆ ಪರರೆಂದು ಭಾವಿಸುವುದೇ ಜೀವನ: ನಟರಾಜ್‌

05:21 PM Jul 07, 2018 | Team Udayavani |

ಚಿಕ್ಕಮಗಳೂರು: ತನ್ನಂತೆ ಪರರು ಎಂದು ಭಾವಿಸುವುದೇ ಜೀವನ ಎಂಬುದು ಮುಳ್ಳೇಗೌಡರ ಪ್ರತಿಪಾದನೆಯಾಗಿತ್ತೆಂದು ಸಾಂಸ್ಕೃತಿಕ ಚಿಂತಕ ಡಿ.ಎಚ್‌.ನಟರಾಜ್‌ ಅಭಿಪ್ರಾಯಪಟ್ಟರು.

Advertisement

ಸಿರಿವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌.ಬಿ.ಮುಳ್ಳೇಗೌಡರ 88 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸದಾ ಕ್ರಿಯಾಶೀಲರಾಗಿದ್ದ ಮುಳ್ಳೇಗೌಡರು ಉತ್ತಮ ಚಿಂತಕರೂ ಆಗಿದ್ದರು. ಲೌಕಿಕದ ಜೊತೆಗೆ ಪಾರಮಾರ್ಥಿಕ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಯಿಸುತ್ತಿದ್ದರು. ಲೋಕಕ್ಕೆ ಉಪಕಾರಿಯಾಗಿ ಬದುಕಬೇಕೆಂಬುದು ಅವರ ಜೀವನ ಸಂದೇಶವಾಗಿತ್ತು. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಮುಳ್ಳೇಗೌಡರು ದೃಷ್ಟಿ ಹರಿಸದ ಕ್ಷೇತ್ರವಿರಲಿಲ್ಲ. ಕೃಷಿ, ಪರಿಸರ, ತೋಟಗಾರಿಕೆ, ಸಹಕಾರ, ಶಿಕ್ಷಣ, ಆಡಳಿತ, ಕ್ರೀಡೆ, ಸಾರಿಗೆ, ಕಲೆ, ಧರ್ಮ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅವರ ಪರಿಶ್ರಮವನ್ನು ಗುರುತಿಸುವಂತಾಗಿದೆ ಎಂದರು.

ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಮಾತನಾಡಿ, ದೇಶೀಯ ಮನಸ್ಥಿತಿಯ ಮುಳ್ಳೇಗೌಡರು ಕೃಷಿ ಕ್ಷೇತ್ರವನ್ನು ಪ್ರೀತಿಯಿಂದ ಅವಲಂಬಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನಲ್ಲೂ ಸಕ್ರೀಯರಾಗಿದ್ದರು. ರಾಸಾಯನಿಕಗಳ ಅತಿಯಾದ ಬಳಕೆಯ ಪರಿಣಾಮ ನಿತ್ಯ ವಿಷವನ್ನೆ ಸೇವಿಸುತ್ತಿದ್ದೇವೆಂಬ ಆತಂಕ ಅವರಲ್ಲಿತ್ತು.

ಶಿಸ್ತಿನ ಜೀವನ, ಯೋಜನೆಯೊಂದಿಗೆ ಮುನ್ನಡೆಯುವ ಕಾರ್ಯಶೈಲಿ, ಸಾವಯವ ಕೃಷಿಯ ಬಗ್ಗೆ ಆಸಕ್ತಿಯನ್ನು ಅವರಿಂದಲೇ ತಾವು ರೂಢಿಸಿಕೊಂಡಿರುವುದಾಗಿ ಹೇಳಿದರು. ಸಿರಿವಾಸೆ ಗ್ರಾ.ಪಂ.ಅಧ್ಯಕ್ಷೆ ರೂಪಾ ಕೃಷ್ಣಮೂರ್ತಿ, ನಿರ್ದೇಶಕ ಎಸ್‌. ಎಂ.ಪ್ರಸನ್ನಕುಮಾರ ಮಾತನಾಡಿದರು. 

ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಂ.ಭೋಜೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸಿ.ಕೆ. ಚಂದ್ರಯ್ಯ, ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್‌.ಎಂ.ದೇವಣ್ಣಗೌಡ ನೂತನ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. 

Advertisement

ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದವರಿಗಾಗಿ ಸರಾಫ್‌ ಕೃಷ್ಣಸ್ವಾಮಿ ದತ್ತಿನಿಧಿಯ 5,000 ರೂ. ಗಳ ನಗದು ಬಹುಮಾನವನ್ನು 122 ಅಂಕ ಗಳಿಸಿದ ಸುಷ್ಮಿತಾಗೆ ಗ್ರಾಮದ ಮುಖಂಡರಾದ ಮಂಜುನಾಥ್‌ ವಿತರಿಸಿದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ನಿರ್ದೇಶಕರುಗಳಾದ ಕಲಾಪ್ರಸನ್ನ, ಮಲ್ಲೇಶ್‌, ಮಂಜಪ್ಪಗೌಡ, ಪ್ರಾಧ್ಯಾಪಕ ದಿನೇಶ್‌, ಕೊಳಗಾಮೆಯ ಎಸ್‌.ಎಂ.ನಂಜುಂಡೇಗೌಡ ವೇದಿಕೆಯಲ್ಲಿದ್ದರು. ಮುಖ್ಯಶಿಕ್ಷಕಿ ಅನುಸೂಯ ವಿಶ್ವನಾಥ್‌ ಸ್ವಾಗತಿಸಿ, ಶಿಕ್ಷಕಿ ಶಶಿಕಲಾ ನಿರೂಪಿಸಿ, ಶಿಕ್ಷಕ ಬಸವರಾಜ ವಂದಿಸಿದರು. ಪುಷ್ಪಾ ದಿನೇಶ್‌ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next