ಉಡುಪಿ: ನಿಮ್ಮದೇ ಆದ ಜೀವನದ ಓಟವನ್ನು ರೂಢಿಸಿಕೊಳ್ಳಬೇಕು. ನಿಮ್ಮ ಭವಿಷ್ಯ ಮತ್ತು ಜೀವನ ಕ್ಷಿಪ್ರಗತಿಯ ಓಟವಲ್ಲ, ಅದು ಮ್ಯಾರಥಾನ್ ಎಂದು ಬಜಾಜ್ ಫಿನ್‌ಸರ್ವ್ ಕಂಪೆನಿಯ ಮಾನವ ಸಂಪದ ವಿಭಾಗದ ಸಮೂಹ ಮುಖ್ಯಸ್ಥ ದೀಪಕ್ ರೆಡ್ಡಿ ಕಿವಿಮಾತು ಹೇಳಿದ್ದಾರೆ.
ಮಣಿಪಾಲ ಗ್ರೀನ್ಸ್‌ನಲ್ಲಿ ರವಿವಾರ ನಡೆದ ಮಾಹೆ ವಿ.ವಿ. 29ನೇ ಘಟಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ವರ್ಚುವಲ್ ಮೂಲಕ ಮಾತನಾಡಿದರು.
ಪ್ರೀತಿ ಮತ್ತು ಸಂತೋಷ ಇವೆರಡು ವೃತ್ತಿಪರ ಭವಿಷ್ಯದ ಎರಡು ಮುಖ್ಯ ವಿಚಾರಗಳು. ನೀವು ಏನಾಗಬೇಕೆಂದು ನಿರ್ಧರಿಸುವಾಗ ಶಾಂತವಾಗಿ ಯೋಚಿಸಬೇಕು ಎಂದು ಮಣಿಪಾಲದ ಟ್ಯಾಪ್ಮಿಯಿಂದ ಕಲಿತು ಹೊರಬಂದ ಬಳಿಕ ತಮಗಾದ ಅನುಭವಗಳನ್ನು ರೆಡ್ಡಿ ವಿವರಿಸಿದರು.
ನಮ್ಮ ವಿದ್ಯಾರ್ಥಿಗಳು ನಮ್ಮ ಹೆಮ್ಮೆಯಾಗಿ ಜಾಗತಿಕ ಸ್ತರದಲ್ಲಿ ನಿಂತಿದ್ದಾರೆ. ಸಂಸ್ಥೆಯ ಸ್ಥಾಪಕ ಡಾ| ಟಿಎಂಎ ಪೈಯವರ ಮುನ್ನೋಟ, ಕಠಿನ ಪರಿಶ್ರಮವೇ ಇದಕ್ಕೆ ಕಾರಣ ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಹೇಳಿದರು.
ಕೋವಿಡ್‌ದಿಂದ ಹೊರಬರಲು ನಾವು ಈಗಲೂ ಹೋರಾಡುತ್ತಿದ್ದೇವೆ. ಈ ನಡುವೆ ನಾವು ಅತ್ಯುತ್ತಮ ಶಿಕ್ಷಣ ಮತ್ತು ಸೌಲಭ್ಯವನ್ನು ಕೊಡುತ್ತಿದ್ದೇವೆ ಎಂದು ಮಾಹೆ ಮಂಗಳೂರು ಕ್ಯಾಂಪಸ್ ಸಹಕುಲಪತಿ ಡಾ| ದಿಲೀಪ್ ಜಿ. ನಾಯ್ಕ ಹೇಳಿದರು. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಘಟಿಕೋತ್ಸವದ ಮುಕ್ತಾಯವನ್ನು ಘೋಷಿಸಿದರು. ಸಹಕುಲಪತಿ ಡಾ| ಸಿ.ಎಸ್. ತಮ್ಮಯ್ಯ ವಂದಿಸಿದರು.
ಇದನ್ನೂ ಓದಿ:ಐಪಿಎಲ್ ಕ್ವಾಲಿಫೈಯರ್-1: 9ನೇ ಸಲ ಫೈನಲ್ ತಲುಪಿದ ಚೆನ್ನೈ
ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಅಧ್ಯಕ್ಷ ಡಾ| ರಂಜನ್ ಆರ್. ಪೈ, ಸಹಕುಲಪತಿಗಳಾದ ಡಾ| ಪಿಎಲ್‌ಎನ್‌ಜಿ ರಾವ್, ಡಾ| ಪ್ರಜ್ಞಾ ರಾವ್, ಕುಲಸಚಿವ ಡಾ| ನಾರಾಯಣ ಸಭಾಹಿತ್, ಮೌಲ್ಯಮಾಪನ ಕುಲಸಚಿವ ಡಾ| ವಿನೋದ ವಿ. ಥಾಮಸ್ ಉಪಸ್ಥಿತರಿದ್ದರು.