ಅದು ದಟ್ಟ ಕಾಡು. ಎಲ್ಲೆಲ್ಲೂ ನೀರವ ತುಂಬಿಕೊಂಡ ಆ ಕಾಡಿನಲ್ಲಿ ಒಂದು ಒಂಟಿ ಮನೆ. ಅಲ್ಲೊಬ್ಬಳು ಲೇಖಕಿ. ಅವಳಿಗೆ ಮಾತು ಬರುವುದಿಲ್ಲ. ಲ್ಯಾಪ್‌ಟಾಪ್ ಎದುರು ಕುಳಿತು, ಏನನ್ನೋ ಬರೆಯುತ್ತಿದ್ದಾಳೆ. ಇದ್ದಕ್ಕಿದ್ದಂತೆ ತನ್ನ ಮೊಬೈಲಿಂದ ಲ್ಯಾಪ್‌ಟಾಪ್‌ಗೆ ಒಂದು ಮೆಸೇಜು ಬರುತ್ತೆ. ಹಿಂತಿರುಗಿ ನೋಡಿದಾಗ ಅಲ್ಲಿ ಆಕೆಯ ಮೊಬೈಲ್ ಇರುವುದಿಲ್ಲ. ಆಗಲೇ ಅವಳಿಗೆ ಗೊತ್ತಾಗೋದು, ಇಲ್ಲಿ ತಾನು ಒಂಟಿಯಲ್ಲ, ಯಾರೋ ಇದ್ದಾರೆ ಅಂತ. ಮುಖವಾಡ ಧರಿಸಿದ ಯುವಕ ಅದಾಗಲೇ ಅವಳ ಮನೆಯನ್ನು ಹೊರಗಿನಿಂದ ಲಾಕ್ ಮಾಡಿರುತ್ತಾನೆ. ಹೊರಗೇ ಸುತ್ತಾಡುತ್ತಾ, ಆಕೆಗೆ ನಾನಾ ಹಿಂಸೆ ಕೊಡುವ ಆತ, ನೆರವಿಗೆ ಧಾವಿಸಿಬಂದ ಅವಳ ಬಾಯ್‌ಫ್ರೆಂಡ್ ಅನ್ನೂ ಬಿಡುವುದಿಲ್ಲ. ಮುಖವಾಡಧಾರಿ ವಿರುದ್ಧದ ಅವಳ ಹೋರಾಟವನ್ನು ಬಹಳ ಸಸ್ಪೆನ್ಸಾಗಿ ತೋರಿಸಿದ್ದಾರೆ ನಿರ್ದೇಶಕರು. ಅಂದಹಾಗೆ, ಇದು “ಹುಶ್’ ಎಂಬ ಅಮೆರಿಕನ್ ಸಿನಿಮಾದ ಕತೆ. ಆ ಒಂಟಿ ಲೇಖಕಿಯ ಜಾಗದಲ್ಲಿ ಪ್ರೇಕ್ಷಕ ಕೆಲವೊಮ್ಮೆ ತನ್ನನ್ನೇ ಕಲ್ಪಿಸಿಕೊಂಡು ಬೆಚ್ಚಿ ಬೀಳುತ್ತಾನೆ. ಮೈಕ್ ಫ್ಯಾನಗಾನ್ ನಿರ್ದೇಶಿಸಿದ ಈ ಚಿತ್ರ ಕೇಟ್ ಸೀಗಲ್, ಜಾನ್ ಗ್ಯಾಲ್ಲಾಗೆರ್ ಜೂನಿಯರ್ ನಟನೆಯಿಂದ ಮತ್ತೆ ಮತ್ತೆ ಕಾಡುವಂಥದ್ದು.
Advertisement