Advertisement

ದೇಶದ ಆರ್ಥಿಕ ಭದ್ರತೆಯಲ್ಲಿ ಎಲ್‌ಐಸಿ ಪಾತ್ರ ಅಪಾರ

09:13 AM Feb 08, 2019 | Team Udayavani |

ಬೀದರ: ದೇಶದ ಆರ್ಥಿಕ ಭದ್ರತೆಯಲ್ಲಿ ಎಲ್‌ ಐಸಿ ಪ್ರತಿನಿಧಿಗಳ ಪಾತ್ರ ಅಪಾರವಾಗಿದೆ ಎಂದು ದಕ್ಷಿಣ ಮಧ್ಯ ವಲಯದ ಅಧ್ಯಕ್ಷ ಮಲ್ಲಿಕಾರ್ಜುನ್‌ ನಾಡಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಶಿವನಗರದ ಪಾಪನಾಶ ಕಲ್ಯಾಣ ಮಂಟಪದಲ್ಲಿ ಗುರುವಾರ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ರಾಯಚೂರು ವಿಭಾಗ ಮಟ್ಟದ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ವೃತ್ತಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪಂಚವಾರ್ಷಿಕ ಯೋಜನೆಗಳಲ್ಲಿ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಕೋಟಿಗಟ್ಟಲೆ ಹಣ ಹೂಡಲಾಗುತ್ತದೆ. ಇದು ನಿಜಕ್ಕೂ ನಮ್ಮ ಪ್ರತಿನಿಧಿಗಳ ಶ್ರಮದ ಫಲವಾಗಿರುವುದು ಹೆಮ್ಮೆಯ ಸಂಕೇತ ಎಂದರು. 

1956ರಲ್ಲಿ ಭಾರತೀಯ ಜೀವ ವಿಮಾ ನಿಗಮ ಆರಂಭವಾಯಿತು. 2000 ಇಸವಿ ವರೆಗೆ ಇದೊಂದೇ ಏಕಸ್ವಾಮ್ಯ ವಿಮಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿರುವ ಹೆಗ್ಗಳಿಕೆ ಇದೆ. 1956ಕ್ಕೂ ಮುನ್ನ 244 ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದವು. 1944ರಲ್ಲಿ ಎಸ್‌. ಎಸ್‌. ಅಲಿ ಅವರು ಐಎಲ್‌ಯು ಸಂಘಟನೆ ಹುಟ್ಟು ಹಾಕಿದರು. 1956ರಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳಿಗೆ ಕೊಡಲಾಗುವ ಕಮಿಷನ್‌ ರದ್ದುಪಡಿಸಲು ಆಗಿನ ಸರ್ಕಾರ ಮುಂದಾದಾಗ ಅಲಿ ಅವರು ದೇಶಾದ್ಯಂತ ಹೋರಾಟ ಮಾಡಿ ಕಮಿಷನ್‌ ರದ್ದತಿ ಬಿಲ್‌ಅನ್ನು ನಿಲ್ಲಿಸುವಲ್ಲಿ ಯಶಸ್ಸು ಕಂಡರು. ಆದ್ದರಿಂದ ಅಲಿ ಅವರನ್ನು ಎಲ್‌ ಐಸಿ ಪಾಲಿನ ಭೀಷ್ಮ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.

2000ರ ನಂತರ ದೇಶದಲ್ಲಿ ಎಲ್‌ಐಸಿಗೆ ಪ್ರತಿಸ್ಪರ್ಧಿಗಳಾಗಿ 25 ವಿಮಾ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ನಾವಿಂದು ಸ್ಪರ್ಧೆಗಿಳಿಯಬೇಕಿದೆ. ಸಂಘಟನೆಯಲ್ಲಿ ಶಕ್ತಿಯಿದೆ ಎಂಬುದನ್ನು ತೋರಿಸಬೇಕಿದೆ. ವಿದ್ಯೆ ಹಾಗೂ ವಿನಯವನ್ನು
ಮೈಗೂಡಿಸಿಕೊಂಡು ನಮ್ಮ ಪ್ರಾಣ, ಮಾನ ಕಾಪಾಡಿಕೊಳ್ಳಲು ವೃತ್ತಿಪರ ಪ್ರತಿನಿಧಿಗಳಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.

Advertisement

ಎಲ್‌ಐಸಿ ರಾಯಚೂರು ಹಿರಿಯ ವಿಭಾಗಾಧಿಕಾರಿ ಕೆ.ಆರ್‌. ವೆಂಕಟೇಶ ಪ್ರಸಾದ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶಾದ್ಯಂತ ಒಟ್ಟು 113 ವಿಭಾಗೀಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ರಾಯಚೂರು ವಿಭಾಗ ಈ ಬಾರಿ ಮೂರನೇ ಸ್ಥಾನಕ್ಕೆ ತಲುಪಿರುವುದು ಹೆಮ್ಮೆಯ ಸಂಗತಿಯಾಗಿದೆ. 

ಇದಕ್ಕೆಲ್ಲ ನಮ್ಮ ಜೀವ ವಿಮಾ ನಿಗಮದ ಅಧಿಕಾರಿಗಳು ಹಾಗೂ ವೃತ್ತಿಪರ ಪ್ರತಿನಿಧಿಗಳಾದ ತಮ್ಮ ಸಮನ್ವಯತೆ ಪ್ರಮುಖ ಕಾರಣವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಉಳಿದ ಕಾರ್ಯ ಪೂರ್ಣಗೊಳಿಸಿ ಸಶಕ್ತ ಎಲ್‌ಐಸಿ ಕಂಪನಿಯಾಗಿ ನಿಲ್ಲಲು ಕೈ ಜೋಡಿಸಬೇಕೆಂದು ಕರೆ ನೀಡಿದರು. ಜೀವನದಲ್ಲಿ ಮೂರು ಪ್ರಮುಖ ಆಯ್ಕೆಗಳಿವೆ. ಕೇವಲ ಪ್ರತಿನಿಧಿಯಾಗಿ ಕೆಲಸ ಮಾಡುವುದು, ವೃತ್ತಿಪರರತೆಯಾಗಿ ಎದ್ದು ನಿಲ್ಲವುದು. ಇದನ್ನು ಸಂರಕ್ಷಿಸಿಕೊಳ್ಳಲು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಾಗುತ್ತದೆ ಎಂದರು.

ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ ಬಿರಾದಾರ, ಎಲ್‌ಐಸಿ ರಾಯಚೂರು ವಿಭಾಗದ ಮಾರುಕಟ್ಟೆ ಪ್ರಬಂಧಕ ಸುಬ್ರಮಣಿಯನ್‌, ಲಿಯಾಫಿ (ಲೈಫ್‌ ಇನ್‌ಶೂರೆನ್ಸ್‌ ಏಜೆಂಟ್ಸ್‌ ಫೆಡರೆಷನ್‌ ಆಫ್‌ ಇಂಡಿಯಾ) ರಾಯಚೂರು ವಿಭಾಗದ ಕಾರ್ಯದರ್ಶಿ ಕೆ.ಮಲ್ಕಾಜಯ್ನಾ, ಕೆ.ತಿರುಮಲರೆಡ್ಡಿ, ಬೀದರ್‌ ಎಲ್‌ಐಸಿ ಶಾಖಾಧಿಕಾರಿ ರಮೇಶ ಗಾಯಬಾ, ಉಪ ಶಾಖಾಧಿಕಾರಿ ಆರ್‌.ಬಸನಗೌಡ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌.ಡಿ.ಎಚ್‌. ಬಾಬಾ, ಬಿ.ಈಶ್ವರ, ಬಿ.ನಾಗರಾಜ, ಎಂ.ಕಂದಕೂರ, ರಾಜಶೇಖರ ಲಾಡಿ, ಎಂ.ನಾಗಪ್ಪ , ವೆಂಕಟೇಶ ಉದಬಾಳ, ರಮೇಶ ದಳವಾಯಿ, ಸುಧಿಧೀರ, ಗಣಪತಿ ಸೋಲಪುರೆ ವೇದಿಕೆಯಲ್ಲಿದ್ದರು. ಶಿವಶರಣಪ್ಪ ಹಣಮಶೆಟ್ಟಿ, ವೀರಣ್ಣ ಬ್ಯಾಗೋಟ್ಟಿ, ಧನರಾಜ ಸ್ವಾಮಿ, ಪ್ರಭು ಹಾವಶೆಟ್ಟಿ ಹಾಗೂ ಎಲ್‌ಐಸಿ ಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next