ನವದೆಹಲಿ: ದೇಶದಲ್ಲಿ ಕಳಪೆಗುಣಮಟ್ಟದ ಔಷಧಿ ತಯಾರಿಸುತ್ತಿರುವ ಸಂಸ್ಥೆಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ನಿಯಂತ್ರಣ ಪ್ರಾಧಿಕಾರಗಳು 76 ಸಂಸ್ಥೆಗಳಲ್ಲಿ ಜಂಟಿ ತಪಾಸಣೆ ನಡೆಸಿದ್ದು, ಕಳಪೆ ಔಷಧ ತಯಾರಿಸುತ್ತಿದ್ದ 18 ಸಂಸ್ಥೆಗಳ ಪರವಾನಗಿಯನ್ನು ಮಂಗಳವಾರ ರದ್ದುಗೊಳಿಸಿವೆ.
ಗಾಂಬಿಯಾ ಹಾಗೂ ಉಜ್ಬೇಕಿಸ್ತಾನದ ಮಕ್ಕಳ ಸಾವಿನಲ್ಲಿ ಭಾರತೀಯ ಕಳಪೆ ಔಷಧಿಗಳ ಪಾತ್ರವಿದೆ ಎನ್ನುವ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಭಾರತದಲ್ಲಿ ಈ ಕಟ್ಟುನಿಟ್ಟಿನ ಕ್ರಮದ ಅನುಸರಣೆ ಮಹತ್ವ ಪಡೆದುಕೊಂಡಿದೆ.
20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಔಷಧ ನಿಯಂತ್ರಣ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಅಭಿಯಾನದ ಭಾಗವಾಗಿ ಒಟ್ಟು 203 ಸಂಸ್ಥೆಗಳನ್ನು ಗುರುತಿಸಲಾಗಿತ್ತು. ಮೊದಲ ಹಂತದಲ್ಲಿ 76 ಸಂಸ್ಥೆಗಳನ್ನು ಪರಿಶೀಲಿಸಿ, ಈ ಪೈಕಿ 18 ಸಂಸ್ಥೆಗಳ ಪರವಾನಗಿ ರದ್ದುಗೊಳಿಸಿದ್ದೇವೆ. 26 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಿಲಾಗಿದೆ ಎಂದು ಅನಾಮಧೇಯತೆ ಕೋರಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಮ ಜರುಗಿಸಲಾಗಿರುವ ಸಂಸ್ಥೆಗಳ ಪೈಕಿ ಹಿಮಾಚಲ ಪ್ರದೇಶದ 70, ಉತ್ತರಾಖಂಡದ 45, ಮಧ್ಯ ಪ್ರದೇಶದ 23 ಸಂಸ್ಥೆಗಳು ಸೇರಿವೆ ಎಂದು ಹೇಳಿದ್ದಾರೆ.