Advertisement

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

08:36 PM Oct 19, 2020 | Suhan S |

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕೋವಿಡ್ ಆರೋಗ್ಯ ಕೇಂದ್ರ (ಡಿಸಿಹೆಚ್‌ಸಿ)ದಲ್ಲಿ ಗ್ರಂಥಾಲಯ ಸೌಲಭ್ಯ ಆರಂಭಗೊಂಡಿದ್ದು, ಕೋವಿಡ್ ಕೇಂದ್ರಗಳ ಪೈಕಿ ಮಾದರಿ ಎನಿಸಿಕೊಂಡಿದೆ.

Advertisement

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಹಾಗೂ ಸೂಕ್ತ ಆರೈಕೆ ಮಾಡುವ ಉದ್ದೇಶದಿಂದ ಸಂತೇಮರಹಳ್ಳಿಯಲ್ಲಿ ಹೆಚ್ಚುವರಿಯಾಗಿ 60 ಹಾಸಿಗೆ ಸಾಮರ್ಥ್ಯದ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.  ಈ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ  ಇತ್ತೀಚೆಗೆ ಭೇಟಿ ನೀಡಿ ಅಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದ್ದರು.  ಈ ವೇಳೆ ಓದುವ ಹವ್ಯಾಸ ಇರುವವರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರ ನಿರ್ದೇಶನವನ್ನು ಪಾಲಿಸಿರುವ ಅಧಿಕಾರಿಗಳು ಶೀಘ್ರವಾಗಿ ಗ್ರಂಥಾಲಯ ಆರಂಭಿಸಲು ಕ್ರಮ ಕೈಗೊಂಡಿದ್ದರು. ಇದರ ಫಲವಾಗಿ ಇಂದು ಸಂತೇಮರಹಳ್ಳಿ ಕೋವಿಡ್ ಕೇಂದ್ರದಲ್ಲಿ 700ಕ್ಕೂ ಹೆಚ್ಚು ಪುಸ್ತಕ ಭಂಡಾರವಿದೆ.

ಗ್ರಂಥಾಲಯದಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳು ಲಭ್ಯವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಕಾದಂಬರಿಕಾರರು, ಕವಿಗಳು, ಸಾಹಿತಿಗಳು ರಚಿಸಿರುವ ಕಥೆ, ಕಾದಂಬರಿಗಳನ್ನು ಒಳಗೊಂಡ ಅಮೂಲ್ಯ ಕೃತಿಗಳನ್ನು ಕೋವಿಡ್ ಕೇಂದ್ರ ಗ್ರಂಥಾಲಯದಲ್ಲಿ ಇಡಲಾಗಿದೆ.

ಕುವೆಂಪು, ದ.ರಾ.ಬೇಂದ್ರೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಹಲವಾರು ಖ್ಯಾತ ಲೇಖಕರು ರಚಿಸಿರುವ ಅತ್ಯತ್ತಮ ಪುಸ್ತಕಗಳು, ಕಾವ್ಯ ಸಂಕಲನಗಳನ್ನು ವಾಚನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ  ಕುರಿತ ಕೃತಿ, ಹೆಸರಾಂತ ಮಹಾಪುರುಷರು, ಸಾಧಕರು, ಹೋರಾಟಗಾರರ ಆತ್ಮ ಕಥನಗಳು, ಸಂವಿಧಾನ, ಕರ್ನಾಟಕ ಸಂಸ್ಕೃತಿ, ಶಿಲ್ಪಕಲೆ, ದಾಸ ಸಾಹಿತ್ಯದಂತಹ ಅತ್ಯತ್ತಮ ಪುಸ್ತಕಗಳು ಗ್ರಂಥಾಲಯದಲ್ಲಿವೆ.

Advertisement

ರೈತರಿಗಾಗಿ ಜಲಸಂರಕ್ಷಣೆ, ಶಾಲಾ ಮಕ್ಕಳಿಗೆ ಸಮನ್ವಿತ, ರಚನಾ ಪುಸ್ತಕಗಳು, ರಂಗಭೂಮಿ, ಆಸಕ್ತರಿಗೆ ರಂಗಭೂಮಿ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳು, ಆರೋಗ್ಯ, ಯೋಗ, ಔಷಧೀಯ ಗುಣಗಳ ಸಸ್ಯಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಲಭ್ಯವಿದೆ. ಅನಕ್ಷರಸ್ಥರೂ ಕಲಿಕೆಗೆ ಪ್ರೇರಕವಾಗುವ ಕೂಡಿ ಕಲಿಯೋಣ ದಂತಹ ಪುಸ್ತಕಗಳನ್ನು ಇಡಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನ, ಜೀವನ ಪ್ರೀತಿಯ ಮಹತ್ವ ಕುರಿತ ಕೃತಿಗಳು ಸಹ ಓದಲು ಲಭ್ಯವಿದೆ.

ಕೋವಿಡ್ ಕೇಂದ್ರದಲ್ಲಿ ಆರಂಭಿಸಿರುವ ಗ್ರಂಥಾಲಯದಲ್ಲಿ ಅಚ್ಚುಕಟ್ಟಾಗಿ ಪುಸ್ತಕಗಳನ್ನು ಜೋಡಿಸಿ ಇಡಲಾಗಿದೆ. ಪೀಠೋಪಕರಣಗಳು ಸಹ ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಲಾಗಿದೆ.ಕೋವಿಡ್ ಸೋಂಕಿತರು ಕುಳಿತು ಓದಲು ಗ್ರಂಥಾಲಯದಂತೆಯೇ ಉದ್ದ ಟೇಬಲ್‌ಗಳು, ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.  ಕೋವಿಡ್ ಕೇಂದ್ರದಲ್ಲಿರುವ ಸೋಂಕಿತರಿಗೆ ಮಾತ್ರ ಗ್ರಂಥಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಲಾಗಿದೆ.

ಓದುವ ಹವ್ಯಾಸ ಹಲವರಿಗಿದೆ. ಕೋವಿಡ್ ಕೇಂದ್ರದಲ್ಲಿ ದಾಖಲಾಗುವವರು ಉತ್ತಮವಾಗಿ ಕಾಲ ಕಳೆಯಲು ಸದಭಿರುಚಿಯ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಗ್ರಂಥಾಲಯ ಆರಂಭಗೊಂಡಿದ್ದು ಕೋವಿಡ್ ಕೇಂದ್ರದಲ್ಲಿ ಆರೈಕೆಯಲ್ಲಿರುವವರಿಗೆ ಸದುಪಯೋಗವಾಗಲೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆಶಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next