ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮದಲ್ಲಿ ಐದು ಸಾವಿರ ಜನಸಂಖ್ಯೆಯಿದ್ದು, ಈವರೆಗೆ ಇಲ್ಲಿನ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಸದ್ಯ ಇರುವ ಗ್ರಂಥಾಲಯ ಮಳೆ ಬಂದರೆ ಸಂಪೂರ್ಣ ಸೋರುತ್ತಿದೆ. ದುರಸ್ತಿಯನ್ನೇ ಕಾಣದ ಶಾಲಾ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.
ಓದುಗರಿಗೆ ಕುಳಿತುಕೊಳ್ಳಲು ಸಮರ್ಪಕ ಜಾಗ, ಆಸನ ಮತ್ತು ಟೇಬಲ್‌ಗಳಿಲ್ಲ. ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ಜಾಗ ಮತ್ತು ರ್ಯಾಕ್ ಇಲ್ಲದೇ ಬಂಡಲ್‌ನಲ್ಲಿಹಾಗೆ ಉಳಿದಿವೆ. ಈ ಎಲ್ಲ ಕೊರತೆಯಿಂದ ಓದುಗರಿಗೆ ಹೊಸ ಪುಸ್ತಕಗಳು ಇಲ್ಲದೇ, ಇದ್ದ ಪುಸ್ತಕಗಳನ್ನು ಹಲವಾರು ಭಾರಿ ಓದುವಂತಾಗಿದೆ. ಒಂದೇ ಒಂದು ಸಣ್ಣ ಕೊಠಡಿಯಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಗ್ರಂಥಾಲದಲ್ಲಿದೆ 2,600 ಪುಸ್ತಕ: ಗ್ರಂಥಾಲಯದಲ್ಲಿ 2,600 ಪುಸ್ತಕಗಳಿದ್ದು, ಅವುಗಳನ್ನು ಅಚ್ಚುಕಟ್ಟಾಗಿ ಇಡಲು ರ್ಯಾಕ್ ಮತ್ತು ಜಾಗ ಇಲ್ಲದೇ ಬಂಡಲ್ ಕಟ್ಟಿ ಇಡಲಾಗಿದೆ. ಓದುವ ಪುಸ್ತಕಗಳು ಮೂಲೆ ಸೇರುತ್ತಿರುವುದು ಬೇಸರ ಸಂಗತಿಯಾಗಿದೆ. ಸರಕಾರ ಕೊಟ್ಟ ಪುಸ್ತಕಗಳ ಸಾರ್ವಜನಿಕರಿಗೆ ಉಪಯೋಗವಾಗದೇ ಧೂಳು ಹಿಡಿದುಹಾಳಾಗುತ್ತಿವೆ. ಕಡಕೋಳ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣವಾಗುವುದಕ್ಕೆ ನಿವೇಶನ ಇದ್ದರೂ ಈವರೆಗೆ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿಲ್ಲ. ಇದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಗ್ರಂಥಾಲಯ ನಿರ್ಮಾಣಕ್ಕೆ ಗ್ರಾಪಂನಿಂದ 20 ಗುಂಟೆ ಜಾಗ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಟ್ಟಡ ನಿರ್ಮಿಸುವುದಕ್ಕಾಗಿ ಶಾಸಕರ ಮತ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣವಾದರೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ತಿಪ್ಪಣ್ಣ ಕೊಂಚಿಗೇರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ
-ಪ್ರಕಾಶ ಶಿ. ಮೇಟಿ