Advertisement

ಪೊಲೀಸ್‌ ಠಾಣೆಗಳಲ್ಲೂ ಗ್ರಂಥಾಲಯ!

06:48 AM Jun 02, 2019 | Lakshmi GovindaRaj |

ಬೆಂಗಳೂರು: ಪೊಲೀಸ್‌ ಠಾಣೆ ಎಂದರೆ ನೆನಪಿಗೆ ಬರೋದು ಬರೀ ಪಿಸ್ತೂಲ್‌, ಬಂದೂಕು, ಲಾಠಿ, ಪೊಲೀಸರ ಬೂಟಿನ ಸದ್ದು… ಆದರೆ, ಇದೀಗ ಅದೇ ಠಾಣೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯದ ಹಿರಿಯ ಸಾಹಿತಿಗಳು ರಚಿಸಿರುವ ಸಾಹಿತ್ಯ, ಕಥೆ, ಕಾದಂಬರಿ ಪುಸ್ತಕಗಳನ್ನೂ ಕಾಣಬಹುದು.

Advertisement

ಹೌದು, ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ತಮ್ಮ ವ್ಯಾಪ್ತಿಯ 17 ಪೊಲೀಸ್‌ ಠಾಣೆಗಳಲ್ಲಿ ತಲಾ 20 ಪುಸ್ತಕಗಳನ್ನೊಳಗೊಂಡ ಸಣ್ಣ ಪ್ರಮಾಣದ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಹೆಚ್ಚು ಕೆಲಸದೊತ್ತಡಕ್ಕೆ ಸಿಲುಕಿದ್ದು, ಓದಿನ ಕಡೆ ಆಸಕ್ತಿ ಕಳೆದುಕೊಂಡಿದ್ದಾರೆ.

ಅಲ್ಲದೆ, ಕೆಲ ಸಿಬ್ಬಂದಿಗೆ ತನಿಖಾ ವಿಧಾನಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಬಿಡುವಿನ ಸಮಯದಲ್ಲಿ ಸಿಬ್ಬಂದಿ ಠಾಣೆಯಲ್ಲೇ ಕುಳಿತು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.

ಓದುವ ಹವ್ಯಾಸ ಬೆಳೆಸಿಕೊಂಡರೆ ಎಲ್ಲ ಕೆಲಸಗಳಲ್ಲೂ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದೃಢರಾಗಲಿದ್ದಾರೆ ಎಂದು ಠಾಣೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಪೊಲೀಸ್‌ ಠಾಣೆಗಳಲ್ಲಿ ಗ್ರಂಥಾಲಯ ಆರಂಭಿಸಿರುವ ಬಗ್ಗೆ ಮೆಚ್ಚುಗೆ ಹೊಂದಿದವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಬಹುದು ಎಂದು ಡಿಸಿಪಿ ಅಣ್ಣಾಮಲೈ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ಕೆ.ಅಣ್ಣಾಮಲೈ, ಪೊಲೀಸರು ತಮ್ಮ ಕಾರ್ಯದೊತ್ತಡದಲ್ಲಿ ಇತ್ತೀಚಿನ ದಿನಗಳಲ್ಲಿ ಓದಿನ ಆಸಕ್ತಿ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಪೊಲೀಸ್‌ ಇಲಾಖೆಗೆ ಸೇರುತ್ತಿರುವ ಯುವ ಸಮೂಹ ಓದುತ್ತಿಲ್ಲ.

Advertisement

ಅಲ್ಲದೆ, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಮಾಜ ತಿದ್ದುವ ಕೆಲಸ ಕೂಡ ಮಾಡಬೇಕಿದೆ. ಹೀಗಾಗಿ ಪೊಲೀಸ್‌ ಸಿಬ್ಬಂದಿ ನಾನಾ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಂಡರೆ, ಬೇರೆಯವರಿಗೆ ತಿಳಿ ಹೇಳಬಹುದು ಎಂದರು.

ಪ್ರಾಥಮಿಕವಾಗಿ ಪ್ರತಿ ಠಾಣೆಯಲ್ಲಿ 20 ಪುಸ್ತಕ ಕೊಟ್ಟಿದ್ದು, ಹಿರಿಯ ಸಾಹಿತಿಗಳಾದ ಎಸ್‌.ಎಲ್‌.ಭೈರಪ್ಪ, ನಿವೃತ್ತ ಪೊಲೀಸ್‌ ಅಧಿಕಾರಿಗಳು ಬರೆದಿರುವ ಪಸ್ತುಕಗಳು, ವೀರಪ್ಪನ ಕಾರ್ಯಾಚರಣೆ, ಆಧ್ಯಾತ್ಮ ಕುರಿತಂತೆ ರವಿಶಂಕರ್‌ ಗುರೂಜಿ ಹಾಗೂ ಇತರರು ರಚಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಇಡಲಾಗಿದೆ.

ಸದ್ಯ 2-3 ಠಾಣೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮಾಡಿದ್ದು, ಮುಂದಿನಗಳಲ್ಲಿ ಎಲ್ಲೆಡೆ ಕೋಠಡಿ ನೀಡಲು ಸೂಚಿಸಲಾಗಿದೆ. ಸಿಬ್ಬಂದಿ ಪುಸಕ್ತಗಳನ್ನು ಮನೆಗೆ ಕೊಂಡೊಯ್ದು, ವಾಪಸ್‌ ತಂದು ಕೊಡುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next