Advertisement

ಡಿಜಿಟಲೀಕರಣ ನಿರೀಕ್ಷೆಯಲ್ಲಿ ಗ್ರಂಥಾಲಯ

03:59 PM Oct 20, 2019 | Suhan S |

ಗಂಗಾವತಿ: ಗ್ರಂಥಾಲಯ ಓದುಗನ ಅತ್ಯುತ್ತಮ ಗೆಳೆಯ ಎಂಬ ಮಾತು ಸತ್ಯವಾದದ್ದು. ಒಂದು ಪುಸ್ತಕ ಹಲವು ಗೆಳೆಯರಿದ್ದಂತೆ ಎಂಬ ಮಾತಿದೆ. ಪುಸ್ತಕ ಓದಿಗರಿಗೆ ಒಂಟಿತನ ಕಾಡುವುದಿಲ್ಲ. ಓದುವ ಹವ್ಯಾಸವುಳ್ಳ ವ್ಯಕ್ತಿಗೆ ಗ್ರಂಥಾಲಯಗಳ ಲಾಭ ತಿಳಿದಿರುತ್ತದೆ. ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಉದ್ದೇಶದಿಂದಲೇ ಸರಕಾರ ನಗರ ಹಾಗೂ ಗ್ರಾಮೀಣ ಗ್ರಂಥಾಲಯಗಳನ್ನು ಆರಂಭಿಸಿದೆ.

Advertisement

ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮವಹಿಸಿ ಓದುವವರಿಗೆ ಉದ್ಯೋಗ ಲಭಿಸುತ್ತದೆ. ಓದಿಗೆ ಪೂರಕವಾಗಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ನಗರದ ತಾಪಂ ಮಂಥನ ಆವರಣದಲ್ಲಿ 10 ವರ್ಷಗಳ ಹಿಂದೆ ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಿ ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ. ಗ್ರಂಥಾಲಯದಲ್ಲಿ 2700 ಕಥೆ, ಕವನ, ಕಾದಂಬರಿ ಸೇರಿ ವಿವಿಧ ವಿಷಯದ ಪುಸ್ತಕಗಳಿದ್ದು ಸದಸ್ಯತ್ವ ಸಂಖ್ಯೆ ಕೇವಲ 2500 ಇದೆ. ಗಂಗಾವತಿಯಲ್ಲಿ 08 ಪದವಿ, 1 ಸ್ನಾತಕೋತ್ತರ, 12 ಪಿಯು ಕಾಲೇಜುಗಳಿದ್ದು ಸುಮಾರು 6 ಸಾವಿರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು, ಸಾವಿರಕ್ಕೂ ಅಧಿಕ ನಿವೃತ್ತ ನೌಕರರು ಹೀಗೆ ಓದುಗರ ದೊಡ್ಡ ಸಂಖ್ಯೆಯೇ ಇದೆ.

ಆದರೆ ಗ್ರಂಥಾಲಯಕ್ಕೆ ಆಗಮಿಸಿ ಓದುವವರ ಸಂಖ್ಯೆ ತೀರಾ ಕಡಿಮೆ. ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಪುಸ್ತಕಗಳು, ಕಥೆ, ಕವನ, ಕಾದಂಬರಿ ಪುಸ್ತಕಗಳಿವೆ. ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳ ಪೂರೈಕೆ ಇಲ್ಲ. ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ.  ಇದಕ್ಕೆ ತಕ್ಕಂತೆ ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಿಲ್ಲ.

ನಗರದಲ್ಲಿ ಸುಮಾರು 1.35 ಲಕ್ಷ ಜನಸಂಖ್ಯೆ ಇದ್ದು ಇಸ್ಲಾಂಪೂರ, ಹಿರೇಜಂತಲ್‌, ಜುಲೈನಗರ, ಗಾಂಧಿ ವೃತ್ತ ಸಿಬಿಎಸ್‌ ಗಂಜ್‌ ಭಾಗದಲ್ಲಿ ಗ್ರಂಥಾಲಯಗಳ ಅವಶ್ಯವಿದ್ದು, ಯಾವೊಬ್ಬ ಜನಪ್ರತಿನಿ ಧಿಯೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಸರಕಾರ ತಾಲೂಕು ಮಟ್ಟದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಗಂಗಾವತಿ ಗ್ರಂಥಾಲಯವನ್ನು ನಿರ್ಲಕ್ಷ ಮಾಡಲಾಗಿದೆ. ಇಲ್ಲಿಯ ಗ್ರಂಥಾಲಯದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಹೊಸ ತಲೆಮಾರಿನ ಪುಸ್ತಕಗಳನ್ನು ಪೂರೈಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿ ಪ್ರಕಟವಾಗುವ ಸ್ಪರ್ಧಾತ್ಮಕ ಪುಸ್ತಕಗಳನ್ನು ಪ್ರತಿ ತಿಂಗಳು ಖರೀದಿಸಬೇಕು. ಗ್ರಂಥಾಲಯ ಸಮಯವನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಗ್ರಂಥಾಲಯಕ್ಕೆ ನಾಲ್ವರು ಸಿಬ್ಬಂದಿ ಅವಶ್ಯವಿದ್ದು, ಇದುವರೆಗೆ ಸಹಾಯಕನ ಮೂಲಕ ಗ್ರಂಥಾಲಯ ನಡೆದಿದ್ದು ಸಹಾಯಕ ಗ್ರಂಥ ಪಾಲಕರು ಇತ್ತೀಚೆಗೆ ಆಗಮಿಸಿದ್ದು ಇನ್ನೂ ಸಹ ಸಿಬ್ಬಂದಿ ಕೊರತೆ ಕಾಡುತ್ತಿದೆ.

 

Advertisement

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next