ಹುನಗುಂದ: ತಾಲೂಕಿನ ಅಮರಾವತಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಸ್ವಂತ ಸೂರಿಲ್ಲದೇ ಗ್ರಾಪಂ ನೀಡಿದ ಗುಬ್ಬಿ ಗೂಡಿನಂತಿರುವ ಚಿಕ್ಕ ಕೊಠಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ.
2005ರಲ್ಲಿ ಜಿಪಂ ಅನುದಾನದೊಂದಿಗೆ ಅಮರಾವತಿ ಗ್ರಾಪಂ ನೀಡಿದ ಚಿಕ್ಕ ಕೊಠಡಿಯಲ್ಲಿ ಆರಂಭವಾದ ಈ ಗ್ರಂಥಾಲಯಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಸರ್ಕಾರ ನೀಡುವ ಅನುದಾನ ಮೂರು ದಿನಪತ್ರಿಕೆಗಳಿಗೆ ಸಾಕಾಗುತ್ತಿಲ್ಲ. ಸರ್ಕಾರ ಪ್ರತಿ ತಿಂಗಳು ಕೇವಲ 400 ರೂ ಮಾತ್ರ ನೀಡುತ್ತಿದೆ. ಅದರಲ್ಲೇ ದಿನಪತ್ರಿಕೆಗಳು ಮತ್ತು ತಿಂಗಳ ಸ್ಪರ್ಧಾ ಮ್ಯಾಗ್‌ಜಿನ್ ಕೊಳ್ಳಬೇಕು. ಆದರೆ ಆ ಹಣದಲ್ಲಿ ಮೂರು ದಿನಪತ್ರಿಕೆಗಳೂ ಬರೋದಿಲ್ಲ. ಪ್ರತಿ ತಿಂಗಳ ಈ ಮೂರು ಪತ್ರಿಕೆಗಳ ಬೆಲೆ 450 ರೂ. ಆಗುತ್ತದೆ. ಸರ್ಕಾರ ನೀಡುವ 400 ರೂ. ಹಣಕ್ಕೆ 50 ರೂ ಹೆಚ್ಚಿನ ಹಣವನ್ನು ಗ್ರಂಥಪಾಲಕರೇ ನೀಡುವ ಪರಿಸ್ಥಿತಿ ಇದೆ.
ಅದಕ್ಕಾಗಿ ಸರ್ಕಾರ ನೀಡುವ ಅನುದಾನವನ್ನು 1000ರಿಂದ 1200 ರೂ.ಗೆ ಏರಿಸಬೇಕು. ಅಂದಾಗ ಮಾತ್ರ ಎಲ್ಲ ದಿನಪತ್ರಿಕೆಗಳ ಮತ್ತು ತಿಂಗಳ ಸ್ಪರ್ಧಾ ನಿಯತಕಾಲಿಕೆ ಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಬೇಡಿಕೆ. ಅಮರಾವತಿ ಸಾರ್ವಜನಿಕ ಗ್ರಂಥಾಲಯದಲ್ಲಿ 3100 ಪುಸ್ತಕಗಳಿದ್ದು ಕಳೆದ ಒಂದು ತಿಂಗಳಲ್ಲಿ ಮತ್ತೆ 2 ಸಾವಿರಕ್ಕೂ ಹೆಚ್ಚು ವಿವಿಧ ಪುಸ್ತಕಗಳು ಗ್ರಂಥಾಲಯಕ್ಕೆ ಬಂದಿವೆ. ಆ ಎಲ್ಲ ಪುಸ್ತಕಗಳನ್ನು ಸುರಕ್ಷಿತವಾಗಿ ಜನರಿಗೆ ಕಾಣುವಂತೆ ಗ್ರಂಥಾಲಯದಲ್ಲಿಡಲು ಸ್ಥಳವಿಲ್ಲದೇ ಗಂಟು ಕಟ್ಟಿ ಒಂದು ಮೂಲೆಯಲ್ಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಈ ಗ್ರಂಥಾಲಯದಲ್ಲಿ ಓದಲು ಸ್ಥಳ ಮತ್ತು ಆಸನಗಳ ವ್ಯವಸ್ಥೆ ಕಡಿಮೆ ಇರುವುದರಿಂದ ನಿಂತುಕೊಂಡೇ ಓದುವ ಸ್ಥಿತಿ ಎದ್ದು ಕಾಣುತ್ತಿದೆ. ಸ್ವಂತ ಸೂರಿಲ್ಲ ಎನ್ನುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಅನೇಕ ಬಾರಿ ಸ್ವಂತ ಕಟ್ಟಡಕ್ಕಾಗಿ ಸರ್ಕಾರ ಮತ್ತು ಜನಪ್ರತಿನಿಧಿ ಗಳನ್ನು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗುಬ್ಬಿಯ ಗೂಡಿನಷ್ಟು ಇರುವ ಈ ಗ್ರಂಥಾಲಯದಲ್ಲಿ 3000 ಪುಸ್ತಕಗಳನ್ನು ಮಾತ್ರ ಇಡಲು ಸ್ಥಳಾವಕಾಶವಿದೆ. ಉಳಿದ ಪುಸ್ತಕಗಳನ್ನು ಗಂಟು ಕಟ್ಟಿ ಇಡುವುದು ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ಗ್ರಂಥಪಾಲಕರು. ಸರ್ಕಾರ ಅಮರಾವತಿ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ದೊಡ್ಡ ಕಟ್ಟಡ ಒದಗಿಸಿ ಅನುಕೂಲ ಮಾಡಿಕೊಡಬೇಕಿದೆ.
-ಮಲ್ಲಿಕಾರ್ಜುನ ಬಂಡರಗಲ್ಲ