ಸಿರುಗುಪ್ಪ: ತಾಲೂಕಿನ ಉಪ್ಪಾರಹೊಸಳ್ಳಿ ಗ್ರಾಮದಲ್ಲಿ 5 ವರ್ಷದ ಹಿಂದೆ ಅಗಸಿ ಹತ್ತಿರ ಗ್ರಂಥಾಲಯ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿ ಒಂದೂವರೆ ವರ್ಷದಲ್ಲಿ ಕಟ್ಟಡ ಕಾಮಗಾರಿಯನ್ನು ಅರ್ಧಂಬರ್ಧ ನಿರ್ಮಾಣ ಮಾಡಲಾಗಿದ್ದು ಇಲ್ಲಿಯವರೆಗೆ ಗ್ರಂಥಾಲಯ ಕಟ್ಟಡದ ಕಾಮಗಾರಿ ಮುಗಿಯದ ಕಾರಣ ಹಳೇ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿಯೇ ಗ್ರಂಥಾಲಯ ನಡೆಯುತ್ತಿದೆ!
ಹಳೇ ಗ್ರಾಪಂ ಕಟ್ಟಡವು ಹಳೆಯದಾಗಿದ್ದು, ಮಳೆ ಬಂದರೆ ಮೇಲ್ಛಾವಣಿಯಿಂದ ನೀರು ತೊಟ್ಟಿಕ್ಕುತ್ತದೆ. ಇದರಿಂದ ಗ್ರಂಥಾಲಯಕ್ಕೆ ಬರುವ ಓದುಗರಿಗೆ ಅನಾನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಸುವರ್ಣಗ್ರಾಮ ಯೋಜನೆಯಡಿ ರೂ.2.75ಲಕ್ಷ ವೆಚ್ಚದಲ್ಲಿ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು. ಈ ಕಟ್ಟಡದ ನಿರ್ಮಾಣ ಕಾರ್ಯವನ್ನು ಲ್ಯಾಂಡ್ ಆರ್ಮಿಇಲಾಖೆಗೆ ವಹಿಸಲಾಗಿತ್ತು. ಈ ಇಲಾಖೆಯು ಕಟ್ಟಡವನ್ನು ನಿರ್ಮಾಣ ಮಾಡಿದ್ದು ನೆಲಕ್ಕೆ ಬಂಡೆ ಹಾಸುವ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದರಿಂದ ಗ್ರಾಮಪಂಚಾಯಿತಿಯು ಈ ಕಟ್ಟಡವನ್ನು ತಮ್ಮ ವಶಕ್ಕೆ ಪಡೆಯಲು ಹಿಂದೇಟು ಹಾಕಿದ್ದು, ಅಪೂರ್ಣಗೊಂಡಿರುವ ಕಾಮಗಾರಿಯನ್ನು ಮುಗಿಸಿಕೊಡುವಂತೆ ಗ್ರಾಪಂ ಅಧಿಕಾರಿಗಳು ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳು ಈ ಕಟ್ಟಡದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದೇ ಗ್ರಾಪಂಗೆ ವಹಿಸಲು ಮುಂದಾಗಿದ್ದು ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಲ್ಯಾಂಡ್ ಆರ್ಮಿ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಹಳೇ ಕಟ್ಟಡದಲ್ಲಿಯೇ ಗ್ರಂಥಾಲಯ ನಡೆಯುತ್ತಿದೆ.
ರೂ. 2.75ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡ ಕಾಮಗಾರಿಯನ್ನು ಮುಗಿಸಬೇಕು. ಕಟ್ಟಡವನ್ನು ಗ್ರಂಥಾಲಯಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಪಂ ಅಧಿಕಾರಿಗಳನ್ನು ಅನೇಕ ಬಾರಿ ಒತ್ತಾಯಿಸಲಾಗಿದೆ. ಆದರೆ ಲ್ಯಾಂಡ್ ಆರ್ಮಿಯವರು ಕಟ್ಟಡದ ಕಾಮಗಾರಿಯನ್ನು ಮಾಡಿದ್ದಾರೆ. ಅವರೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ನೆಪ ಹೇಳುತ್ತ ಕಾಲಕಳೆಯುತ್ತಿದ್ದಾರೆ.
– ಕೋರಿ ಪಿಡ್ಡಯ್ಯ, ತಾ.ಪಂ. ಸದಸ್ಯ
-ಆರ್.ಬಸವರೆಡ್ಡಿ ಕರೂರು