Advertisement

ಗ್ರಂಥಾಲಯಗಳು ಪಾಲಿಕೆ ಸುಪರ್ದಿಗೆ

01:32 AM Jun 18, 2019 | Lakshmi GovindaRaj |

ಬೆಂಗಳೂರು: ಗ್ರಂಥಾಲಯ ಸೆಸ್‌ಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಣೆಗಾಗಿ ನಗರದಲ್ಲಿರುವ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಪಾಲಿಕೆ ಸುಪರ್ದಿಗೆ ನೀಡುವಂತೆ ಸರ್ಕಾರವನ್ನು ಕೋರಲು ಪಾಲಿಕೆ ಮುಂದಾಗಿದೆ.

Advertisement

ಗ್ರಂಥಾಲಯ ಸೆಸ್‌ ಪಾವತಿ ವಿಚಾರ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಹಾಗೂ ಬಿಬಿಎಂಪಿ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ಗ್ರಂಥಾಲಯಗಳನ್ನು ಪಾಲಿಕೆಯಿಂದಲೇ ನಿರ್ವಹಣೆ ಮಾಡಲು ಸಿದ್ಧವಿದ್ದು, ತಮ್ಮ ವ್ಯಾಪ್ತಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಅಧಿಕಾರಿಗಳು ಸಜ್ಜಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚಿನ ಸಾರ್ವಜನಿಕ ಗ್ರಂಥಾಲಯಗಳಿದ್ದು, ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಗ್ರಂಥಾಲಯಗಳ ಅಭಿವೃದ್ಧಿಗೆ ಮುಂದಾಗದ ಇಲಾಖೆ ವಿರುದ್ಧ ಸಾರ್ವಜನಿಕರು ಹಾಗೂ ಓದುಗರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಾಲಿಕೆ ಹಾಗೂ ಸರ್ಕಾರದಿಂದ ಅಗತ್ಯ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಗಳು ದೂರುತ್ತಾರೆ.

ಬಿಬಿಎಂಪಿ ಕಳೆದ ಐದು ವರ್ಷಗಳಿಂದ 300 ಕೋಟಿಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿರುವುದರಿಂದ ನಗರದಲ್ಲಿರುವ ಗ್ರಂಥಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೂಡಲೇ ಬಾಕಿ ಹಣ ಪಾವತಿಸಬೇಕೆಂದು ಗ್ರಂಥಾಲಯ ಇಲಾಖೆ ಅಧಿಕಾರಿಗಳು ಪತ್ರಗಳನ್ನು ಬರೆಯುತ್ತಿರುವುದು ಒಂದೆಡೆಯಾದರೆ, ಗ್ರಂಥಾಲಯಗಳನ್ನು ಪಾಲಿಕೆ ಹಣದಲ್ಲೇ ಅಭಿವೃದ್ಧಿ ಮಾಡಲಾಗಿದೆ ಎಂಬುದು ಪಾಲಿಕೆಯ ವಾದ.

ಇತ್ತೀಚೆಗೆ ಗ್ರಂಥಾಲಯ ಸೆಸ್‌ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಿಬಿಎಂಪಿ, ವಿವಿಧ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕೂಡಲೇ ಬಾಕಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತರು, ಗ್ರಂಥಾಲಯಗಳ ನಿರ್ವಹಣೆ ಹೊಣೆಯನ್ನು ಪಾಲಿಕೆಗೆ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.

Advertisement

ಸರ್ಕಾರಕ್ಕೆ ಪ್ರಸ್ತಾವನೆ: ನಗರದಲ್ಲಿ ಶಾಖಾ, ಸಮುದಾಯ ಮಕ್ಕಳ ಗ್ರಂಥಾಲಯ, ವಾಚನಾಲಯ, ಸಂಚಾರಿ ಗ್ರಂಥಾಲಯ, ಅಲೆಮಾರಿ ಗ್ರಂಥಾಲಯ, ಕೊಳೆಗೇರಿ, ಶಾಲಾ ಕಾಲೇಜುಗಳಲ್ಲಿ ಸೇರಿ ಒಟ್ಟು 250 ಗ್ರಂಥಾಲಯಗಳಿವೆ. ಆ ಪೈಕಿ ಪ್ರತಿ ವಾರ್ಡ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಪಾಲಿಕೆಗೆ ನೀಡುವಂತೆ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಗ್ರಂಥಾಲಯ ಸಂಪೂರ್ಣ ನಿರ್ವಹಣೆಯನ್ನು ಪಾಲಿಕೆಯಿಂದ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದರು.

ಏನಿದು ಗ್ರಂಥಾಲಯ ಸೆಸ್‌ ಗೊಂದಲ?: “ಸಾರ್ವಜನಿಕ ಗ್ರಂಥಾಲಯ ಕಾಯ್ದೆ -1965’ರ ನಿಯಮ 30ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ.6ರಷ್ಟನ್ನು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡಬೇಕು. ಅದರಂತೆ ಈ ಹಿಂದೆ ಪಾಲಿಕೆಯಿಂದ ಹಣ ಪಾವತಿಸಿದ್ದು, 2014-15ನೇ ಸಾಲಿನಲ್ಲಿ 240 ಕೋಟಿ ರೂ., 2017-18ನೇ ಸಾಲಿನಲ್ಲಿ 156 ಕೋಟಿ ರೂ. ಹಾಗೂ 2018-19ನೇ ಸಾಲಿನಲ್ಲಿ 160 ಕೋಟಿ ರೂ. ಸೇರಿ ಒಟ್ಟು 346 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬಿಬಿಎಂಪಿಯ ವಾದವೇನು?: 200ಕ್ಕೂ ಹೆಚ್ಚಿನ ಗ್ರಂಥಾಲಯಗಳ ನಿರ್ವಹಣೆಗೆ ವಾರ್ಷಿಕ ಕೇವಲ 50-60 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗುತ್ತಿದ್ದು, ಉಳಿದ ಹಣವನ್ನು ರಾಜ್ಯದ ಇತರೆ ಭಾಗಗಳಲ್ಲಿರುವ ಗ್ರಂಥಾಲಯಗಳಿಗೆ ಬಳಸಲಾಗುತ್ತಿದೆ. ಬೆಂಗಳೂರು ತೆರಿಗೆದಾರರ ಹಣವನ್ನು ಬೇರೆ ಕಡೆ ಬಳಸುತ್ತಿರುವ ಬಗ್ಗೆ ಕೆಲ ಆಕ್ಷೇಪಗಳು ವ್ಯಕ್ತವಾಗಿವೆ. ಆ ಹಿನ್ನೆಲೆಯಲ್ಲಿ ನಗರದಲ್ಲಿರುವ ಗ್ರಂಥಾಲಯಗಳನ್ನು ಪಾಲಿಕೆಯಿಂದಲೇ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಗ್ರಂಥಾಲಯ ಸೆಸ್‌ ಕುರಿತ ಸಭೆಯಲ್ಲಿ ನಗರದಲ್ಲಿರುವ ಗ್ರಂಥಾಲಯಗಳನ್ನು ಪಾಲಿಕೆಗೆ ನೀಡುವ ಕುರಿತು ಚರ್ಚಿಸಲಾಗಿದೆ. ಅದರಂತೆ ಈ ಕುರಿತು ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next