Advertisement

ಗ್ರಂಥಾಲಯಗಳು ಜ್ಞಾನ ಭಂಡಾ

01:30 PM Aug 30, 2018 | |

ಹೊನ್ನಾಳಿ: ಗ್ರಂಥಾಲಯಗಳು ಜ್ಞಾನ ಸಂಪತ್ತಿನ ಭಂಡಾರಗಳಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಗ್ರಂಥಪಾಲಕ ಡಾ| ಬಿ.ಯು. ಕಣ್ಣಪ್ಪನವರ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ
ರಾಷ್ಟ್ರೀಯ ಗ್ರಂಥಪಾಲಕರ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಮೊಬೈಲ್‌ಗ‌ಳ ಮೊರೆ ಹೋಗದೆ ಗ್ರಂಥಾಲಯಕ್ಕೆ ತೆರಳಿ ಗ್ರಂಥಗಳು ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪಿತಾಮಹ ಡಾ| ಎಸ್‌. ಆರ್‌. ರಂಗನಾಥನ್‌ ಮೂಲತಃ ಗಣಿತ
ಉಪನ್ಯಾಸಕರಾಗಿದ್ದು, ನಂತರ ಗ್ರಂಥಾಲಯದ ಬಗ್ಗೆ ಸತತ ಅಧ್ಯಯನ ಮಾಡಿ ಗ್ರಂಥಾಲಯ ಪಿತಾಮಹ ಎನ್ನಿಸಿಕೊಂಡರು. ಅವರ ಜನ್ಮದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. 

ರಾಷ್ಟ್ರೀಯ ಗುಡ್ಡಗಾಡು ಓಟಗಾರ ಎನ್‌.ಎಸ್‌. ರಘು ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. ಓಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೇಜರ್‌ ಧ್ಯಾನಚಂದ್‌ ಅವರ ಕೆಚ್ಚೆದೆಯ ಆಟದಿಂದ ಮೂರು ಬಾರಿ ಚಿನ್ನದ ಪದಕ ಲಭಿಸಿದೆ ಎಂದರು.

Advertisement

ನಮ್ಮ ದೇಶದಲ್ಲಿ ಕ್ರಿಕೆಟ್‌ ಬಿಟ್ಟು ಬೇರೆ ಕ್ರೀಡೆಯೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಯುವಕರು ಕ್ರಿಕೆಟ್‌ಗೆ ಜೋತು ಬಿದ್ದಿರುವುದು ವಿಷಾದಕರ ಎಂದು ಹೇಳಿದರು.
 
ತಾಲೂಕಿನ ಚಿಕ್ಕಬಾಸೂರು ನಿವಾಸಿ, ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಸಾಹಸಿ ಪರ್ವತಾರೋಹಿ ಸಿ.ವಿಕ್ರಮ್‌, ಎವರೆಸ್ಟ್‌ ಏರಿದ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು. ಪಿಎಸ್‌ಐ ಕಾಡದೇವರಮಠ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಿ.ವಿಕ್ರಮ್‌ ಹಾಗೂ ಎನ್‌. ಎಸ್‌. ರಘು ಅವರನ್ನು ಕ್ರೀಡಾ ವಿಭಾಗದಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲ ಶಿವಬಸಪ್ಪ ಎತ್ತಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಎಚ್‌.ಕೆ. ಶೈಲಜಾ ಪ್ರಾರ್ಥಿಸಿದರು. ಗ್ರಂಥಪಾಲಕ ಎಂ. ನಾಗರಾಜನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್‌. ಹರೀಶ ಪ್ರಾಸ್ತಾವಿಕ ಮಾತನಾಡಿದರು. ಡಾ| ಎ.ಎಲ್‌. ಪಾರ್ಥಸಾರಥಿ ವಂದಿಸಿದರು. ಉಪನ್ಯಾಸಕ ಬೆಳ್ಳುಳ್ಳಿ ಕೊಟ್ರೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next