Advertisement

ಗ್ರಂಥಪಾಲಕ, ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗೆ ಕತ್ತರಿ!

11:43 AM Jan 05, 2023 | Team Udayavani |

ಕಾರ್ಕಳ: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 18 ಗ್ರಂಥಪಾಲಕರು ಹಾಗೂ 15 ಮಂದಿ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳ ಸಹಿತ 33 ಹುದ್ದೆಗಳ ಸ್ಥಳಾಂತರಕ್ಕೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಹುದ್ದೆ ಸೃಜನೆಯ ಬದಲಿಗೆ ಕಡಿಮೆ ಮಕ್ಕಳ ನೆಪವೊಡ್ಡಿ ಹುದ್ದೆಯನ್ನೇ ವರ್ಗಾಯಿಸಲಾಗಿದೆ.

Advertisement

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯ ಭಾರವಿಲ್ಲದಿರುವ ನೆಪವನ್ನು ಮುಂದಿರಿಸಿ ಬೋಧಕರ ಹುದ್ದೆಗಳನ್ನು ಕಾರ್ಯಭಾರಕ್ಕೆ ಅನುಗುಣವಾಗಿ ಅಗತ್ಯವಿರುವ ಕಾಲೇಜುಗಳಿಗೆ ಸ್ಥಳಾಂತರಿಸಲು ಕಾಲೇಜು ಶಿಕ್ಷಣ ಇಲಾಖೆಯ ಬೋಧಕೇತರ ವರ್ಗಾವಣೆ ನಿಯಂತ್ರಿಸುವ ಸಲುವಾಗಿ ರೂಪಿಸಿರುವ ನಿಯಮ-3ರಲ್ಲಿ ಕಡ್ಡಾಯಗೊಳಿಸುವಿಕೆ ನಿಯಮದಡಿ ಈ ಆದೇಶ ಹೊರಡಿಸಿದೆ.

ಇದ್ದ ಹುದ್ದೆಗೆ ಕತ್ತರಿ

200ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರಕಾರಿ ಪ್ರ.ದ. ಕಾಲೇಜುಗಳಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರು, ದೈ.ಶಿ. ನಿರ್ದೇಶಕ ಹುದ್ದೆ ಸಹಿತ ಅತೀ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಮತ್ತು ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳು ಮಂಜೂರಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹುದ್ದೆಯೊಂದಿಗೆ ಸ್ಥಳಾಂತರಿಸಲಾಗಿದೆ. ಕೆಲವು ಕಾಲೇಜುಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಕೆಲವು ಕಾಲೇಜುಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅಲ್ಲಿಗೆ ಗ್ರಂಥಪಾಲಕರು, ದೈ.ಶಿ. ನಿರ್ದೇಶಕರ ಹುದ್ದೆಗಳ ಆವಶ್ಯಕತೆಯಿದ್ದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿರುವುದನ್ನು ಗಮನಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹುದ್ದೆ ಸೃಜನೆ ಬದಲಿಗೆ ಇದ್ದ ಹುದ್ದೆಗೆ ಕತ್ತರಿ ಪ್ರಯೋಗಿಸಲಾಗಿದೆ.

ಅನಗತ್ಯವಾಗಿ ದೂರಕ್ಕೆ ಸ್ಥಳಾಂತರದ ಆರೋಪ

Advertisement

ಕಾಲೇಜು ಶಿಕ್ಷಣ ಇಲಾಖೆ 2021ರಲ್ಲಿ ರೂಪಿಸಿರುವ ಬೋಧಕರ ವರ್ಗಾವಣೆ ಕಾಯ್ದೆಯಲ್ಲಿ ಇಲ್ಲದ ನಿಯಮಾನುಸಾರ ಗ್ರಂಥಪಾಲಕರು, ದೈ.ಶಿ. ನಿರ್ದೇಶಕರ ಹುದ್ದೆಗಳನ್ನು ಸ್ಥಳಾಂತರಿಸಲಾಗಿದೆ. ಗ್ರಂಥಪಾಲಕರು ಮತ್ತು ದೈ.ಶಿ.ನಿ. ಒಟ್ಟು ದಾಖಲಾದ ವಿದ್ಯಾರ್ಥಿಗಳ ಆಧಾರದಲ್ಲಿ ಹುದ್ದೆ ಸ್ಥಳಾಂತರಿಸಿರುವುದು ಅವೈಜ್ಞಾನಿಕ ವಿಧಾನ. ಈ ರೀತಿಯ ಅವೈಜ್ಞಾನಿಕ ಹುದ್ದೆ ಸ್ಥಳಾಂತರವು ದ.ಕ., ಉಡುಪಿ ಜಿÇÉೆಯ ವಿವಿಧ ಸರಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರು, ದೈ.ಶಿ. ನಿರ್ದೇಶಕರಿಗೆ ತೀವ್ರ ತೊಂದರೆ ನೀಡಿದೆ. ಕೆಲಸ ಮಾಡುತ್ತಿರುವ ಕಾಲೇಜಿನ ಹತ್ತಿರದ ಸರಕಾರಿ ಕಾಲೇಜುಗಳಲ್ಲಿ ಕಾರ್ಯಭಾರ ಲಭ್ಯವಿದ್ದರೂ ಅನಗತ್ಯವಾಗಿ ನಮ್ಮನ್ನು ದೂರದ ಊರುಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಅನ್ಯಾಯವೆಸಗಲಾಗಿದೆ ಎನ್ನುವ ಅಳಲು ವರ್ಗಾವಣೆ ಆದೇಶ ಪಡೆದವರದ್ದಾಗಿದೆ.

ಶೈಕ್ಷಣಿಕ ವರ್ಷದ ಮಧ್ಯೆ ಅವೈಜ್ಞಾನಿಕ ಆದೇಶವಾಗಿದೆ. ಇದರಿಂದ ಕರಾವಳಿ ಭಾಗದ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗಲಿದೆ ಎನ್ನುವುದು ಮಕ್ಕಳ ಅಳಲು.

ದಕ್ಷಿಣ ಕನ್ನಡ ಜಿಲ್ಲೆ

ದ.ಕ. ಜಿಲ್ಲೆಯಲ್ಲಿ 19 ಕಾಲೇಜುಗಳಿವೆ. ದೈಹಿಕ ಶಿಕ್ಷಣ ನಿರ್ದೇಶಕರ ಒಟ್ಟು 17 ಹುದ್ದೆಗಳು ಮಂಜೂರಾಗಿವೆ. 4 ಹುದ್ದೆಗಳು ಮೊದಲೇ ಖಾಲಿಯಿದ್ದವು. ಈಗ 3 ಹುದ್ದೆಗಳು ಹುದ್ದೆ ರಹಿತ ವರ್ಗಾವಣೆಗೊಂಡಿವೆ. 10 ಹುದ್ದೆ ಭರ್ತಿಯಾಗಿವೆ. ಮಂಜೂರುಗೊಂಡ ಗ್ರಂಥಪಾಲಕರ ಒಟ್ಟು ಹುದ್ದೆ 17. ಅವುಗಳಲ್ಲಿ 3 ಹುದ್ದೆಗಳು ವರ್ಗಾವಣೆ ಸಹಿತ ರದ್ದಾ ಗುತ್ತವೆ. 5 ಖಾಲಿಯಾಗಿ 9 ಹುದ್ದೆ ಭರ್ತಿಯಾಗಿವೆ.

ಉಡುಪಿ ಜಿಲ್ಲೆ

ಉಡುಪಿ ಜಿಲ್ಲೆಯಲ್ಲಿ 12 ಕಾಲೇಜು ಗಳಿವೆ. ಮಂಜೂರುಗೊಂಡ 7 ಗ್ರಂಥ ಪಾಲಕರ ಹುದ್ದೆಗಳ ಪೈಕಿ 1 ಹುದ್ದೆ ಸಹಿತ ವರ್ಗಾವಣೆಯಾಗಿ 6 ಹುದ್ದೆಗಳು ಭರ್ತಿಯಾಗಿವೆ. ದೈಹಿಕ ಶಿಕ್ಷಣ ನಿರ್ದೇಶಕರ 9 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 3 ಹುದ್ದೆ ಸಹಿತ ವರ್ಗಾವಣೆಯಾಗಿ ಪ್ರಸ್ತುತ 6 ಹುದ್ದೆಗಳಷ್ಟೇ ಭರ್ತಿಯಾಗಿವೆ.

ದ.ಕ., ಉಡುಪಿಗೆ ಅನ್ಯಾಯ

ದ.ಕ., ಉಡುಪಿ ಜಿಲ್ಲೆಗಳ ಪ್ರ.ದ. ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಜಿಲ್ಲೆಗಳ ಗ್ರಂಥಪಾಲಕರು, ದೈ.ಶಿ. ನಿರ್ದೇಶಕರಿಗೆ ವರ್ಗಾವಣೆ ಅನುಕೂಲ ತಂದುಕೊಟ್ಟಿದೆ. ಅವರಿಗೆ ತಮ್ಮ ಸ್ವಂತ ಜಿಲ್ಲೆ, ಊರುಗಳಿಗೆ ತೆರಳಲು ಅವಕಾಶ ಸಿಕ್ಕಿದೆ. ಆದರೆ ದ.ಕ., ಉಡುಪಿ ಜಿಲ್ಲೆಯವರಿಗೆ ಹೊರ ಜಿಲ್ಲೆಗೆ ವರ್ಗಾವಣೆಯಾಗಿರುವುದರಿಂದ ಕರಾವಳಿಗೆ ಅನ್ಯಾಯವಾಗಿದೆ. ಜಿಲ್ಲೆಯ ಮಂತ್ರಿಗಳು, ಶಾಸಕರ ಬಳಿಗೆ ಸಮಸ್ಯೆಯನ್ನು ತಂದಿದ್ದರೂ ಸ್ಪಂದನೆಯಿಲ್ಲ ಎನ್ನುವುದು ಸಂತ್ರಸ್ತರ ಅಳಲು.

ಕೆಲವು ಕಾಲೇಜುಗಳಲ್ಲಿ ಗ್ರಂಥಪಾಲಕರು, ದೈ.ಶಿ. ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು ನಿವೃತ್ತರಾಗಿದ್ದಾರೆ. ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳಿರುವ ಕಾಲೇಜಿಗೆ ಅವರನ್ನು ನಿಯೋಜಿಸಲು ಕೌನ್ಸೆಲಿಂಗ್‌ ಮೂಲಕ ಪ್ರಕ್ರಿಯೆ ನಡೆಸಲಾಗುತ್ತಿದೆ. –ಡಾ| ಎಸ್‌.ಬಿ. ಅಪ್ಪಾಜಿ ಗೌಡ, ನಿರ್ದೆಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು

ಸರಕಾರದ ನಿರ್ದೇಶನದಂತೆ ಈ ಪ್ರಕ್ರಿಯೆ ನಡೆದಿದೆ. ಆದೇಶ ಪಾಲನೆ ನಮ್ಮ ಕರ್ತವ್ಯ. – ಪ್ರೊ| ಜೆನಿಫರ್‌ಲೊಲಿಟ, ಜಂಟಿ ನಿರ್ದೆಶಕರು, ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು-ಉಡುಪಿ

ಬಾಲಕೃಷ್ಣ ಭೀಮಗುಳಿ

 

Advertisement

Udayavani is now on Telegram. Click here to join our channel and stay updated with the latest news.

Next