Advertisement

ಕುವೈತ್‌ ಗೃಹ ಬಂಧನದಲ್ಲಿದ್ದ ಯುವಕರಿಗೆ ಮುಕ್ತಿ

01:39 PM Sep 08, 2017 | Team Udayavani |

ಬೀದರ: ನಕಲಿ ಏಜೆಂಟರ ಮೋಸದಿಂದ ಬದುಕು ಕಟ್ಟಿಕೊಳ್ಳಲು ಕುವೈತ್‌ಗೆ ತೆರಳಿ ಗೃಹ ಬಂಧನದಲ್ಲಿದ್ದ ಜಿಲ್ಲೆಯ ಯುವಕರಿಗೆ ಮುಕ್ತಿ ಸಿಕ್ಕಿದೆ.ಮಾಧ್ಯಮದಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಕಲಿ ಏಜೆಂಟರು ಯುವಕರಿಗೆ ಸೌಲಭ್ಯ ಕಲ್ಪಿಸಿದ್ದು, ಭಾರತಕ್ಕೆ ಮರಳಿ ಬರಲು ವ್ಯವಸ್ಥೆ ಮಾಡಿಸಿದ್ದಾರೆ.

Advertisement

ಕೈ ತುಂಬಾ ಹಣ ಸಂಪಾದಿಸುವ ಆಸೆಯಿಂದ ಹುಮನಾಬಾದ ತಾಲೂಕಿನ 13 ಜನ ಯುವಕರು ವೀಸಾ ಏಜೆಂಟರ ಮೋಸದಾಟಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದರು. ಕುವೈತ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡಲು ಮುಂಬೈ ಮೂಲಕ ತೆರಳಿದ್ದ ಪ್ರತಿಯೊಬ್ಬ ಯುವಕರಿಂದ 80 ಸಾವಿರ ರೂ. ಪಡೆದು ಟೂರಿಸ್ಟ್‌ ವೀಸಾ ನೀಡಿ ಮೋಸ ಮಾಡಲಾಗಿತ್ತು. ವೀಸಾ ಅವಧಿ ಮುಗಿದಿದ್ದು, ಕಳೆದ 10 ದಿನದಿಂದ ಕಟ್ಟಡವೊಂದರಲ್ಲಿ ಕೂಡಿ ಹಾಕಿ ಕೆಲಸವನ್ನೂ ಕೊಡದೆ, ಅನ್ನ ನೀರು ನೀಡದೇ ಕಿರುಕುಳ ನೀಡಲಾಗುತ್ತಿತ್ತು.

ಗೃಹ ಬಂಧನದಲ್ಲಿದ್ದ ಯುವಕರು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಆತಂಕಕಾರಿ ಮಾಹಿತಿ ನೀಡಿದ್ದರು. ತಮಗಾದ ವಂಚನೆ, ಅನುಭವಿಸುತ್ತಿರುವ ನರಳಾಟದ ಬಗ್ಗೆ ಮಾಧ್ಯಮದ ಮಿತ್ರರೊಬ್ಬರಿಗೆ ವಿಡಿಯೋ
ಸಂದೇಶ ರವಾನಿಸಿ, ನಮ್ಮನ್ನು ಜೀತದಾಳು ಮಾಡಿಕೊಳ್ಳುವ ಭೀತಿ ಇದ್ದು, ಬಂಧನದಿಂದ ಮುಕ್ತ ಮಾಡಲು ಸಹಕರಿಸುವಂತೆ ಮನವಿ ಮಾಡಿದ್ದರು. ಈ ಕುರಿತು “ಉದಯವಾಣಿ’ ಬುಧವಾರದ ಸಂಚಿಕೆಯಲ್ಲಿ “ಕುವೈತ್‌ನಲ್ಲಿ
ಬೀದರನ 13 ಯುವಕರಿಗೆ ಗೃಹ ಬಂಧನ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ವರದಿ ಗಮನಿಸಿದ ನಕಲಿ ಏಜೆಂಟರು ಗಾಬರಿಗೊಂಡು ಬಂಧನದಲ್ಲಿರುವ ಯುವಕರನ್ನು ಸಂಪರ್ಕಿಸಿ ಊಟ ಸೇರಿದಂತೆ ಇತರ ವ್ಯವಸ್ಥೆ ಮಾಡಿದ್ದಾರೆ. ವೀಸಾ ಅವಧಿ ಮುಗಿದು ಹಣ ಇಲ್ಲದೇ ಹೆಣಗಾಡುತ್ತಿದ್ದ ನಾಲ್ವರು ಯುವಕರಿಗೆ ಸ್ವದೇಶಕ್ಕೆ ವಾಪಸ್‌ ಬರಲು ಟಿಕೆಟ್‌ ಕಳುಹಿಸಿದ್ದಾರೆ. ಚಂದ್ರಕಾಂತ ಬಸವಕಲ್ಯಾಣ, ಆನಂದ, ಪರಶುರಾಮ ಸಿಂದಗಿ
ಮತ್ತು ಗೌತಮ ಮಂಗಲಗಿ ಎಂಬ ಯುವಕರು ಕುವೈತ್‌ ಏರ್‌ಪೋರ್ಟ್‌ನಿಂದ ಹೊರಟಿದ್ದು ವಾಯಾ ಮಸ್ಕತ್‌ ಮೂಲಕ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಭಾರತಕ್ಕೆ ವಾಪಸ್ಸಾಗುತ್ತಿರುವ ಬಗ್ಗೆ ಯುವಕರು ಖುದ್ದು ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಇನ್ನುಳಿದ 9 ಯುವಕರನ್ನೂ ಸ್ವದೇಶಕ್ಕೆ ಕರೆತರಲು ಏಜೆಂಟರು ವ್ಯವಸ್ಥೆ ಮಾಡಿದ್ದಾರೆ. ಮಾಧ್ಯಮದ ಸುದ್ದಿಯಿಂದ ಕೊನೆಗೂ ಗೃಹ ಬಂಧನದಲ್ಲಿದ್ದ ಯುವಕರು ನಿಟ್ಟಿಸಿರು ಬಿಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next