ಹೊಸದಿಲ್ಲಿ: ಹಲವು ದಶಕಗಳಿಂದಲೂ ಸೇನಾ ಪಡೆಗಳಿಗೆ ಅಗತ್ಯವಾಗಿದ್ದ ಆಧುನೀಕರಣ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಭಾರೀ ಪ್ರಮಾಣದಲ್ಲಿ ಲಘು ಮಶಿನ್ ಗನ್‌ಗಳು, ಮದ್ದುಗುಂಡುಗಳು ಮತ್ತು ರೈಫಲ್‌ಗಳನ್ನು ಖರೀದಿಸಲು ಸರಕಾರ ಮುಂದಾಗಿದ್ದು, ಹಳೆಯದಾಗಿರುವ ಶಸ್ತ್ರಾಸ್ತ್ರಗಳ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಸುಮಾರು 44 ಸಾವಿರ ಕೋಟಿ ರೂ. ವೆಚ್ಚದಲ್ಲಿ ಭಾರೀ ಖರೀದಿಗೆ ನಿರ್ಧರಿಸಲಾಗಿದ್ದು, ಇದು ದೇಶದ ಸೇನಾ ಇತಿಹಾಸದಲ್ಲೇ ಬೃಹತ್ ಪ್ರಮಾಣದ್ದಾಗಿದೆ. 7 ಲಕ್ಷ ರೈಫಲ್‌ಗಳು, 44 ಸಾವಿರ ಲಘು ಮಶಿನ್ ಗನ್‌ಗಳು ಮತ್ತು 44,600 ಕಾರ್ಬೈನ್‌ಗಳನ್ನು ಖರೀದಿ ಮಾಡುವ ನಿರ್ಧಾರ ಅಂತಿಮಗೊಂಡಿದೆ. ಇದಕ್ಕೆ ಸೇನೆ ಹಾಗೂ ರಕ್ಷಣಾ ಸಚಿವಾಲಯಗಳು ಕೂಡ ಹಸಿರು ನಿಶಾನೆ ತೋರಿವೆ.
ಹಲವು ವರ್ಷಗಳಿಂದಲೂ ಸೇನೆ ಈ ಆಧುನೀಕರಣ ಪ್ರಕ್ರಿಯೆಗೆ ಬೇಡಿಕೆ ಸಲ್ಲಿಸುತ್ತಿತ್ತು. ಪಾಕಿಸ್ಥಾನ ಹಾಗೂ ಚೀನದ ಸೇನಾಪಡೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಆಧುನೀಕರಣ ಅಗತ್ಯವಾಗಿತ್ತು. ಇತ್ತೀಚೆಗೆ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು. ಸೇನೆಯ ಆಧುನೀಕರಣವು ಸರಕಾರದ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವೇಳೆ ಹೇಳಿದ್ದರು. ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಕೊರತೆಗಳನ್ನೂ ನೀಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದರು.
7.62 ಎಂಎಂ ಗನ್ ಖರೀದಿ ಶೀಘ್ರ: ಕೆಲವೇ ದಿನಗಳ ಹಿಂದೆ 7.62 ಕ್ಯಾಲಿಬರ್ ಗನ್‌ಗಳನ್ನು ಖರೀದಿಸುವ ಬಗ್ಗೆ ಟೆಂಡರ್ ಕರೆಯಲಾಗಿತ್ತು. ಆದರೆ ಕೇವಲ ಒಂದೇ ಸಂಸ್ಥೆ ಅರ್ಹವಾಗಿತ್ತು. ಹೀಗಾಗಿ ಈಗ ಹೊಸದಾಗಿ ಮಾಹಿತಿ ಅರ್ಜಿಯನ್ನು (ಆರ್‌ಎಫ್ಐ) ಕರೆಯಲಾಗಿದೆ. 10 ಸಾವಿರ ಲಘು ಮಶಿನ್ ಗನ್‌ಗಳನ್ನು ಖರೀದಿಸಲು ಸೇನೆ ನಿರ್ಧರಿಸಿತ್ತು. ಸೇನೆ ಈಗಾಗಲೇ 7.62 ಎಂಎಂ ರೈಫಲ್‌ಗಳಿಗೆ ಇರಬೇಕಾದ ಗುಣಲಕ್ಷಣಗಳನ್ನು ನಿಗದಿಸಿದೆ. ಇದಕ್ಕೆ ಸಂಬಂಧಿಸಿದ ರಕ್ಷಣಾ ಉಪಕರಣ ಖರೀದಿ ಸಮಿತಿ ಶೀಘ್ರದಲ್ಲೇ ಅನುಮೋದನೆ ನೀಡುವ ನಿರೀಕ್ಷೆಯಿದೆ.
ರೈಫಲ್ ಖರೀದಿ ವಿಳಂಬ: ಜೂನ್‌ನಲ್ಲಿ ಇಶಾಪುರ ಗನ್ ಫ್ಯಾಕ್ಟರಿ ರೂಪಿಸಿದ್ದ ರೈಫಲ್ ಅನ್ನು ಸೇನೆ ತಿರಸ್ಕರಿಸಿತ್ತು. ಪ್ರಾಯೋಗಿಕ ಪರೀಕ್ಷೆಯಲ್ಲಿ ಗನ್‌ಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಣೆ ಮಾಡಿರಲಿಲ್ಲ. ರೈಫಲ್‌ಗಳ ಖರೀದಿ ಹಲವು ಕಾರಣಗಳಿಂದಾಗಿ ತುಂಬಾ ವಿಳಂಬಗೊಂಡಿದೆ. ಈಗಾಗಲೇ ಐಎನ್‌ಎಸ್‌ಎಎಸ್ ರೈಫಲ್‌ಗಳನ್ನು ಸೇನೆ ಬಳಸುತ್ತಿದ್ದು, ಇದು ತುಂಬಾ ಹಳೆಯದಾಗಿದೆ. ಇದನ್ನು ಬದಲಿಸಲು ಸುಮಾರು 7 ಲಕ್ಷ ರೈಫಲ್‌ಗಳು ಅಗತ್ಯವಿವೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರೈಫಲ್‌ಗಳಿಗಾಗಿ ಅರ್ಜಿ ಕರೆಯಲಾಗಿದ್ದು, ಇದಕ್ಕೆ 20 ಸಂಸ್ಥೆಗಳು ಪ್ರತಿಕ್ರಿಯಿಸಿವೆ.
ಕಾರ್ಬೈನ್ ಖರೀದಿ ಪ್ರಕ್ರಿಯೆ ಆರಂಭ: ಸುಮಾರು 44,600 ಕಾರ್ಬೈನ್‌ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ. ಹಲವು ಕಂಪನಿಗಳು ಇದಕ್ಕೆ ಅರ್ಹವಾಗಬೇಕು ಎಂಬ ಕಾರಣಕ್ಕೆ ನಿಯಮಾವಳಿಗಳನ್ನು ವಿಶಾಲಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಲಡಾಖ್‌ನಲ್ಲಿ ಹೊಸ ಸೇತುವೆ
ಲಡಾಖ್‌ನಲ್ಲಿ ವಾಸ್ತವಿಕ ಗಡಿ ರೇಖೆಯ ಸಮೀಪದಲ್ಲಿ ಹೊಸ ಸೇತುವೆಗೆ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್) ಚಾಲನೆ ನೀಡಿದೆ. ಈ ತಿಂಗಳಲ್ಲೇ ಇದು ಮೂರನೇ ಸೇತುವೆಯಾಗಿದ್ದು, ಈ ಭಾಗದಲ್ಲಿ ಸೇನಾ ಸಾಗಣೆಗೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಪ್ರಾಜೆಕ್ಟ್ ಹಿಮಾಂಕ್ ಎಂದು ಕರೆಯಲಾಗಿದ್ದು, ಲೇಹ್-ಲೋಮಾ ರಸ್ತೆಯಲ್ಲಿ ಲಿಂಚೆ ನದಿಗೆ ನಿರ್ಮಿಸಲಾಗಿದೆ. ಇದು 30 ಮೀಟರ್ ಉದ್ದವಿದೆ.