Advertisement

ಮಳೆಯಿಂದ ಮಕ್ಕಳಿಗೆ ಮುಕ್ತಿ

12:56 PM Jun 12, 2018 | Team Udayavani |

ಹರಪನಹಳ್ಳಿ: ಚಾವಣಿ ಒಡೆದು ಮಳೆ ನೀರು ತರಗತಿ ಕೊಠಡಿಯೊಳಗೆ ಶೇಖರಣೆಯಾಗುತ್ತಿದ್ದ ತಾಲೂಕಿನ ದುಗ್ಗಾವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೋದಂಡರಾಮ ಸೋಮವಾರ ಭೇಟಿ ನೀಡಿ ಶಿಥಿಲ ಕಟ್ಟಡ ಪರಿಶೀಲಿಸಿದರು.

Advertisement

ಶಾಲಾ ಕಟ್ಟಡ ಶಿಥಿಲವಾಗಿದೆ. ತುರ್ತಾಗಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಪ್ರಕೃತಿ ವಿಕೋಪ ಅನುದಾನದಡಿ ಶಾಲೆಗೆ ಎರಡು ಕೊಠಡಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಡಿಡಿಪಿಐ ಕೋದಂಡರಾಮ ಭರವಸೆ ನೀಡಿದರು. ಆಗ ಗ್ರಾಪಂ ಸದಸ್ಯ ಎಂ.ಎಚ್‌. ಪರಶುರಾಮ ಮಾತನಾಡಿ, ಈ ಹಿಂದೆ ಶಾಲೆಗೆ ಭೇಟಿ ನೀಡಿದ್ದ ಅಂದಿನ ಡಿಡಿಪಿಐ ಕೂಡ ಭರವಸೆ ನೀಡಿ ಹೋಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನೀವು ಹಾಗೆಯೇ ಮಾಡಿದರೆ ಮಕ್ಕಳ ಗತಿ ಏನು ಎಂದು ಪ್ರಶ್ನಿಸಿದರು.

ದುಗ್ಗಾವತಿ ಶಾಲೆ ಶತಮಾನ ಕಂಡ ಶಾಲೆ ಎನ್ನಿಸಿಕೊಂಡಿರುವುದರಿಂದ ಸರ್ಕಾರದಿಂದ 1 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಬಿಇಒ, ಸಿಆರ್‌ಪಿ, ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರು ಒಂದು ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳುಹಿಸಲು ಬಿಇಒ ಎಲ್‌.ರವಿ ಅವರಿಗೆ ಡಿಡಿಪಿಐ ಸೂಚಿಸಿದರು.

ಶಿಥಿಲ ಕಟ್ಟಡದಲ್ಲಿ ಯಾವ ಕಾರಣಕ್ಕೂ ಮಕ್ಕಳನ್ನು ಕೂರಿಸಬೇಡಿ. ಮುಖ್ಯ ಶಿಕ್ಷಕರ ಕಚೇರಿಯನ್ನು ಇನ್ನೊಂದು
ಕೊಠಡಿಗೆ ಸ್ಥಳಾಂತರ ಮಾಡಿ ಮಕ್ಕಳ ತರಗತಿಗೆ ಅನುಕೂಲ ಮಾಡಿಕೊಡಿ ಎಂದು ಮುಖ್ಯ ಶಿಕ್ಷಕ ಕೆ.ಜಿ.ರುದ್ರಗೌಡ್ರ
ಅವರಿಗೆ ಡಿಡಿಪಿಐ ಆದೇಶಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ ಬಸವರಾಜ, ಮುಖಂಡರಾದ ಎಚ್‌.ಎಂ. ರಾಜಕುಮಾರ, ಹಲವಾಗಲು ಮಂಜುನಾಥ, ಅಂಗಡಿ ವೀರೇಶ್‌, ಎಚ್‌. ಮಹಾಂತೇಶ್‌, ಯೋಗೇಶ್‌, ಕೆ.ಬಸವರಾಜ್‌ ಹಾಗೂ ಗ್ರಾಮಸ್ಥರಿದ್ದರು. ಜೂ.10ರ ಸಂಚಿಕೆಯಲ್ಲಿ “ಸೊರುತಿಹುದು ಸರ್ಕಾರಿ ಶಾಲೆಗಳ ಮಾಳಿಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next