ಹೊಸದಿಲ್ಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (Indian Olympic Association) ಅಧ್ಯಕ್ಷೆ ಪಿಟಿ ಉಷಾ ಮತ್ತು ಬಂಡಾಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರ ನಡುವಿನ ವೈಷಮ್ಯ ಮತ್ತೊಂದು ಹಂತಕ್ಕೆ ತಲುಪಿದೆ. 12 ಕ್ಕೂ ಹೆಚ್ಚು ಮಂದಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು ಐಒಸಿಯ(IOC) ಹಿರಿಯ ಅಧಿಕಾರಿ ಜೆರೋಮ್ ಪೊವಿ ಅವರಿಗೆ ಪತ್ರವೊಂದನ್ನು ಬರೆದು, ”ಸಂಸ್ಥೆಯನ್ನು ನಿರಂಕುಶ ರೀತಿಯಲ್ಲಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಗುರುವಾರ ನಡೆಸಿದ ಸಭೆಯಲ್ಲಿತೀವ್ರ ಜಟಾಪಟಿಯಾಗಿತ್ತು. ಅಲ್ಲಿ ಇಕ್ಕಟ್ಟಿಗೆ ಸಿಲುಕಿದ ಉಷಾ ಅವರು ರಘುರಾಮ್ ಅಯ್ಯರ್ ಅವರನ್ನು ಸಿಇಒ ಹುದ್ದೆಯಿಂದ ತೆಗೆದುಹಾಕುವ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು.
IOA ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಸಾಂಸ್ಥಿಕ ಸಂಬಂಧಗಳು ಮತ್ತು ಆಡಳಿತದ ಮುಖ್ಯಸ್ಥ ಪೊವಿ ಅವರಿಗೆ ಬರೆದ ಪತ್ರದಲ್ಲಿ ರಾಷ್ಟ್ರೀಯ ಸಂಸ್ಥೆ ಪ್ರಜಾಸತ್ತಾತ್ಮಕವಾಗಿ ಕೆಲಸ ನಡೆಸಬೇಕೆಂದು ಬಯಸುತ್ತೇವೆ ಎಂದು ಬರೆದಿದ್ದಾರೆ.
ಅವರು IOA CEO ಸ್ಥಾನಕ್ಕಾಗಿ ಮರು-ಜಾಹೀರಾತು ನೀಡಲಿದ್ದು “ಮುಂದಿನ ಎರಡು ತಿಂಗಳೊಳಗೆ ಸಾಮೂಹಿಕವಾಗಿ ಮತ್ತು ಅಧ್ಯಕ್ಷರೊಂದಿಗೆ ಸೂಕ್ತ ಅಭ್ಯರ್ಥಿಯನ್ನು ನೇಮಿಸುವ ಗುರಿಯನ್ನು ಹೊಂದಿದ್ದಾರೆ” ಎಂದೂ ಬರೆದಿದ್ದಾರೆ.
“IOA ಅಧ್ಯಕ್ಷರ ನಿರಂಕುಶಾಧಿಕಾರದ ನಡವಳಿಕೆ ವಿಷಾದನೀಯವಾಗಿದೆ ಮತ್ತು ಅಂತಹ ಅನುಭವಕ್ಕೆ ನಿಮ್ಮನ್ನು ಒಳಪಡಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಇದು ಪ್ರತಿ ಸಭೆ ಅಥವಾ ಅವಕಾಶದಲ್ಲಿ ತನ್ನ ಸಹೋದ್ಯೋಗಿಗಳ ಅಭಿಪ್ರಾಯಗಳು ಮತ್ತು ಕಾಳಜಿಗಳನ್ನು ಕಡೆಗಣಿಸುವುದು ಮಾಡುವುದು ಉಷಾ ಅವರಿಗೆ ರೂಢಿಯಾಗಿದೆ” ಎಂದು ಬರೆದಿದ್ದಾರೆ.