Advertisement
ಬೋಟ್‌ಗಳು ಸಮುದ್ರದಲ್ಲಿ 24*7 ಕಾರ್ಯಚರಿಸುತ್ತವೆ. ಇದರಿಂದ ಮೀನುಗಾರಿಕೆ ಇಲಾಖೆಗೆ ಮಲ್ಪೆ ಬಂದರಿನಲ್ಲಿ ಒಟ್ಟು ದೋಣಿಗಳ ಸಂಖ್ಯೆ, ಲಂಗರು ಹಾಕಿರುವ -ಸಮುದ್ರಕ್ಕೆ ತೆರಳಿರುವ ದೋಣಿಗಳ ನಿಖರ ಮಾಹಿತಿ ಸಿಗುವುದಿಲ್ಲ. ಇದಕ್ಕಾಗಿ ಇಲಾಖೆಯು ಬೋಟ್‌ಗಳ ಹಾಜರಾತಿ ಮತ್ತು ಸಂಕಷ್ಟಕ್ಕೀಡಾಗುವ ಮೀನುಗಾರರಿಗೆ ರಕ್ಷಣೆ ನೀಡುವುದಕ್ಕಾಗಿ ತಂತ್ರಜ್ಞಾನದ ಕಡೆಗೆ ಮುಖ ಮಾಡಿದೆ.
ಇಲಾಖೆಯು ಪ್ರಾಯೋಗಿಕ ಹಂತದಲ್ಲಿ ಮಲ್ಪೆ ಬಂದರಿನಲ್ಲಿ ನಾಡದೋಣಿ, ಟ್ರಾಲ್ ಬೋಟ್‌ಗಳಿಗೆ ಜಿಎಸ್‌ಎಂ ಮತ್ತು ಜಿಪಿಆರ್‌ಎಸ್ ಆಧಾರಿತ ಟ್ರ್ಯಾಕರ್ ಆಳವಡಿಸಿತ್ತು. ಈ ಪೈಲೆಟ್ ಪ್ರಾಜೆಕ್ಟ್ ಯಶಸ್ವಿಯಾಗಿದೆ. ಈಗ ಮಲ್ಪೆ ಬಂದರಿನ ನಾಡದೋಣಿ ಮತ್ತು ಟ್ರಾಲ್ ಬೋಟ್‌ಗಳಿಗೆ ಟ್ರ್ಯಾಕರ್ ಅಳವಡಿಸುವ ಕುರಿತು ಸರಕಾರಕ್ಕೆ ಪತ್ರ ಬರೆದಿದೆ. ಜತೆಗೆ ಕಾರವಾರ ಮತ್ತು ಮಂಗಳೂರು ಬಂದರುಗಳಲ್ಲಿಯೂ ಬೋಟ್‌ಗಳಿಗೆ ಅಳವಡಿಸುವ ಚಿಂತನೆಯಿದೆ. ಏನೆಲ್ಲ ಮಾಹಿತಿ?
ಜಿಎಸ್‌ಎಂ ಮೂಲಕ ಮಲ್ಪೆ ಬಂದರಿಗೆ ಆಗಮಿಸುವ ಬೋಟ್‌ಗಳ ಲಾಗಿನ್ ಮತ್ತು ಲಾಗ್ ಔಟ್ ಮಾಹಿತಿ ಸಿಗಲಿದೆ. ಜತೆಗೆ ಬೇರೆ ಬೋಟ್‌ಗಳು ಮಲ್ಪೆಯನ್ನು ಪ್ರವೇಶಿದರೆ ಆ ಮಾಹಿತಿಯೂ ದೊರಕುತ್ತದೆ. ಜಿಪಿಆರ್‌ಎಸ್ ಮೂಲಕ ಇಲಾಖೆ, ಬೋಟು ಮಾಲಕರು ಮತ್ತು ಸಮುದ್ರದಲ್ಲಿರುವ ಬೋಟ್ ಸಿಬಂದಿ ನಡುವೆ ದ್ವಿಮುಖ ಸಂವಹನ ನಡೆಸಬಹುದು. ಲೈವ್ ಲೋಕೇಶ್ ಮಾಹಿತಿ, ಬೋಟ್ ಯಾವ ಪ್ರದೇಶದಲ್ಲಿ ಎಷ್ಟು ಸಮಯ ಕಳೆದಿದೆ ಎನ್ನುವ ಮಾಹಿತಿ ಸಿಗಲಿದೆ. ಚಂಡಮಾರುತದಂತಹ ಪ್ರಾಕೃತಿಕ ವಿಕೋಪ ಹಾಗೂ ಅವಘಡ ಸಂದರ್ಭ ಟ್ರ್ಯಾಕರ್‌ನ ಪ್ಯಾನಿಕ್ ಗುಂಡಿ ಒತ್ತಿದರೆ ಜಿಪಿಆರ್‌ಎಸ್ ಲೈವ್ ಲೋಕೇಶನ್ ಮಾಹಿತಿಯುಳ್ಳ ಸಂದೇಶ ನೇರವಾಗಿ ಇಲಾಖೆಗೆ ಮತ್ತು ಬೋಟ್ ಮಾಲಕರಿಗೆ ಸಿಗುತ್ತದೆ.
Related Articles
ಈ ಟ್ರ್ಯಾಕರ್ ಕೇವಲ ಜಿಪಿಆರ್‌ಎಸ್ ನೆಟ್‌ವರ್ಕ್ ಇರುವ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡಲಿದೆ. ಸುಮಾರು 30 ಕಿ.ಮೀ. ವ್ಯಾಪ್ತಿಯ ವರೆಗೆ ಸಂವಹನ ನಡೆಸಲು ಸಾಧ್ಯವಿದೆ. ಆದ್ದರಿಂದ ಇದು ನಾಡದೋಣಿ ಮತ್ತು ಟ್ರಾಲ್ ಬೋಟ್‌ಗಳಿಗೆ ಸೂಕ್ತ ಎನ್ನುವ ಅಭಿಪ್ರಾಯವಿದೆ. ಟ್ರ್ಯಾಕರ್‌ಗೆ ಪ್ರಸ್ತುತ 15,000 ರೂ. ಬೆಲೆ ಇದ್ದು, ಮೂರು ವರ್ಷ ಗ್ಯಾರೆಂಟಿ ಇದೆ. ಸುಮಾರು 20 ಗಂಟೆಗಳ ಬ್ಯಾಟರಿ ಬ್ಯಾಕ್‌ಆಪ್ ಇದ್ದು, ಬೋಟ್‌ನಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಟ್ರ್ಯಾಕರ್ ಅಳವಡಿಕೆಗೆ ಸರಕಾರ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ.
Advertisement
ಮಲ್ಪೆಯಿಂದ ಮೀನುಗಾರಿಕೆಗೆ ತೆರಳುವ ಬೋಟುಗಳ ಹಾಜರಾತಿ, ಭದ್ರತೆ, ಸಂಕಷ್ಟಕ್ಕೀಡಾಗುವ ಮೀನುಗಾರರಿಗೆ ರಕ್ಷಣೆ ನಿಟ್ಟಿನಲ್ಲಿ ಮಲ್ಪೆಯ ಬೋಟ್‌ಗಳಿಗೆ ಜಿಪಿಆರ್‌ಎಸ್ ಮತ್ತು ಜಿಎಸ್‌ಎಂ ಆಧಾರಿತ ಟ್ರ್ಯಾಕರ್ ಅಳವಡಿಸುವ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಟ್ರ್ಯಾಕರ್ ಆಳವಡಿಸಿದರೆ ಇಲಾಖೆಗೆ ಬೋಟ್‌ಗಳ ಸಂಪೂರ್ಣ ಮಾಹಿತಿ ದೊರಕಲಿದೆ. ಸಂಕಷ್ಟಕ್ಕೀಡಾಗುವ ಬೋಟ್, ಸಿಬಂದಿಯನ್ನು ಶೀಘ್ರವಾಗಿ ರಕ್ಷಿಸಬಹುದು.-ಗಣೇಶ್ , ಉಪ ನಿರ್ದೇಶಕರು, ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆ – ತೃಪ್ತಿ ಕುಮ್ರಗೋಡು