ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ಪ್ರತಿ ವಿದ್ಯಾರ್ಥಿಗಳೊಂದಿಗೆ ಖುದ್ದು ಸಂಪರ್ಕದಲ್ಲಿರಲು, ಭಾವನಾತ್ಮಕ ಧೈರ್ಯ ತುಂಬಲು ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಪ್ರಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೋವಿಡ್ 19 ಪಿಡುಗು ಎದುರಾಗದೇ ಇದ್ದಿದ್ದರೆ ಮಾ.27ರಿಂದ ಎಸೆಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದವು. 8.5 ಲಕ್ಷ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರು ನೋಡುತ್ತಿರುವುದನ್ನು ಹತ್ತಿರದಿಂದ ಗಮನಿಸಿದ್ದೇನೆ. ಅದರೆ ಈಗ ಕೋವಿಡ್ 19 ಪಿಡುಗು ಎಲ್ಲ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿದೆ.
ಇಡೀ ಸಮಾಜ ಮೊದಲಿಗೆ ಕೋವಿಡ್ 19 ನೀಡಿರುವ ಪರೀಕ್ಷೆಯನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಸುರೇಶ್ ಕುಮಾರ್ ಅವರು ಶಿಕ್ಷಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ನಿಮ್ಮ ಮಕ್ಕಳು ಎಸೆಸೆಲ್ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ವಿದ್ಯಾರ್ಥಿಗಳೊಂದಿಗೆ ಖುದ್ದಾಗಿ ಸಂಪರ್ಕದಲ್ಲಿದ್ದು, ಅವರಿಗೆ ಭಾವನಾತ್ಮಕವಾದ ಧೈರ್ಯವನ್ನು ತುಂಬುವುದು ಬಹಳ ಪ್ರಮುಖವಾಗಿದೆ.
ನಿಮ್ಮ ಬಳಿ ವಿದ್ಯಾರ್ಥಿಗಳ ಸಂಪರ್ಕ ಸಂಖ್ಯೆಗಳಿರಬಹುದು, ದೂರವಾಣಿ ಮೂಲಕ ಇಂದಿನಿಂದಲೇ ಎಲ್ಲ ವಿದ್ಯಾರ್ಥಿಗಳನ್ನು ಖುದ್ದಾಗಿ ಸಂಪರ್ಕಿಸಿ, ಅವರಿಗೆ ಅಗತ್ಯ ಮಾರ್ಗದರ್ಷನ, ಸ್ಥೈರ್ಯವನ್ನು ತುಂಬಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್ 19 ಸೃಷ್ಟಿಸಿರುವ ಇಂಥ ಕ್ಲಿಷ್ಟಕರ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿ ಎಸೆಸೆಲ್ಸಿ ಪರೀಕ್ಷೆಯನ್ನು ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸದಿಂದ ಎದುರಿಸೋಣ ಎನ್ನುವ ನಂಬಿಕೆಯನ್ನು ನೀವು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ನನ್ನ ಈ ಆಗ್ರಹವನ್ನು ನೀವು ಅಭಿಯಾನದ ಮಾದರಿಯಲ್ಲಿ ಅನುಪಾಲಿಸಿದಲ್ಲಿ ಸಮಾಜಕ್ಕೆ ಇಂಥ ಸಂದರ್ಭದಲ್ಲಿ ಆವಶ್ಯಕವಿರುವ ಧನಾತ್ಮಕ ಸಂದೇಶಗಳನ್ನು ನಾವೆಲ್ಲರೂ ಕೂಡಿ ರವಾನಿಸಿದಂತಾಗುತ್ತದೆ. ಇದಕ್ಕೆ ನೀವು ಸ್ಪಂದಿಸುತ್ತಿಇರಿ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.