ಗದಗ: ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ- 2014ರಲ್ಲಿ ಕಾಯ್ದೆ ಜಾರಿಗೆ ಬಂದು ಐದು ವರ್ಷಗಳು ಕಳೆದರೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅದರ ಪ್ರಾಧಿಕಾರ ರಚನೆಯಾಗಿಲ್ಲ. ಈ ಕುರಿತು ಶೀಘ್ರವೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಿದ್ದು, ಅಗತ್ಯವಾದರೆ ಹೈ ಕೋರ್ಟ್ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸುವುದಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಕಾರವೇ ಕೆರೆ ಸಂರಕ್ಷಣೆ ಮತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2014 ಜಾರಿಗೊಳಿಸಿದೆ. ಇದರಿಂದ ಪಾರಂಪರಿಕ ಜಲಮೂಲಗಳ ರಕ್ಷ ಣೆಯಾಗಲಿದೆ. ವಿವಿಧ ರೀತಿಯಲ್ಲಿ ಆಗಬಹುದಾದ ಕೆರೆಗಳ ಒತ್ತುವರಿ ತಡೆಯವಲ್ಲಿ ನೆರವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ, ಸಣ್ಣ ನೀರಾವರಿ ಇಲಾಖೆ ಅಭಿಯಂತರರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೊಳ ಗೊಂಡಂತೆ ಪ್ರಾಧಿಕಾರ ರಚನೆಯಾಗಬೇಕು. ಕೆರೆಗಳ ಒತ್ತುವರಿ ತೆರವು, ಪುನಶ್ಚೇತನಕ್ಕೆ ಸಂಬಂಧಿಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪ್ರಾಥಮಿಕ ಹಂತದಲ್ಲೇ ವಿಲೇವಾರಿ ಮಾಡಬಹುದಾಗಿದೆ. ಅದಕ್ಕೂ ಮೀರಿದ ವಿವಾದಗಳದ್ದಲ್ಲಿ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೆರೆ ಹಾಗೂ ಸರೋವರ ಹಾಳು ಮಾಡಿದರೆ ಅಂತರ್ಜಲ ಬತ್ತಿ ಹೋಗುತ್ತದೆ. ನೀರು ಪ್ರತಿಯೊಬ್ಬ ಪ್ರಜೆ ಮೂಲಭೂತ ಹಕ್ಕಾಗಿದೆ. ಪಾರಂಪರಿಕ ಜಲಮೂಲಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಕುರಿತು ಕಾನೂನಿನ ಅರಿವು ಹಾಗೂ ಜಾಗೃತಿ ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಲ್ಲಿಯೂ ಇರಬೇಕಾದದ್ದು ಅವಶ್ಯವಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿದರೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಮುಖ್ಯಸ್ಥರು, ಸಂಬಂಧಿತ ಕಂಪನಿಯವರು, ಸಾರ್ವಜನಿಕರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಂಚಾಟೆ ಎಚ್ಚರಿಸಿದರು.