ಬೆಂಗಳೂರು: ಅನಿಯಮಿತವಾಗಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಸಂಸ್ಥೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರಿವಾಜ್ಞೆ -2019ನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಅಮಾಯಕ ಹೂಡಿಕೆದಾರರಿಂದ ಠೇವಣಿ ಸಂಗ್ರಹಿಸಿರುವ ಐಎಂಎ, ವಿನಿವಿಂಕ್, ತ್ರಿಪುರಾ ಚಿಟ್ಸ್, ಬಾದಾಮಿಯ ಭಜಂತ್ರಿ, ಆ್ಯಂಬಿಡೆಂಟ್‌ನಂತಹ ಸಂಸ್ಥೆಗಳು ವಂಚನೆ ಮಾಡಿದರೂ, ಯಾವುದೇ ಶಿಕ್ಷೆಗೆ ಒಳಗಾಗದೇ ಹೂಡಿಕೆದಾರರು ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಸುತ್ತಿರುವುದು ಒಂದು ಭಾಗ. ಹೂಡಿಕೆದಾರರಿಗೆ ಹಣ ಮರಳಿಸುವ ಕೆಲಸ ಮೊದಲು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ರೀತಿಯ ಸಂಸ್ಥೆಗಳ ನಿಯಂತ್ರಣಕ್ಕೆ 2019ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ-2019ನ್ನು ಹೊರಡಿಸಿದೆ. ಈ ಸುಗ್ರೀವಾಜ್ಞೆ ಪ್ರಕಾರ ಅನಿಯಂತ್ರಿತ ಠೇವಣಿ ಸ್ವೀಕರಿಸುವುದು ನಿಷೇಧ. ಅಷ್ಟೇ ಅಲ್ಲದೇ, ಆ ರೀತಿ ಠೇವಣಿ ಸಂಗ್ರಹಿಸಿ ಮೋಸ ಮಾಡುವ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.
ಅನಿಯಂತ್ರಿತ ಠೇವಣಿ ಸಂಗ್ರಹಿಸುವುದು, ಜನರಿಗೆ ಪ್ರೋತ್ಸಾಹಿಸುವುದು ಹಾಗೂ ಜಾಹೀರಾತು ನೀಡುವ ವ್ಯಕ್ತಿ ಅಥವಾ ಸಂಸ್ಥೆಗೆ 2ರಿಂದ 7 ವರ್ಷದ ವರೆಗೆ ಶಿಕ್ಷೆ ಹಾಗೂ 3 ರಿಂದ 10 ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶವಿದೆ. ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಕೊಂಡು ವಂಚನೆ ಮಾಡಿದರೆ, ಅಂತಹ ವ್ಯಕ್ತಿ ಅಥವಾ ಕಂಪನಿಗೆ 3 ರಿಂದ 10 ವರ್ಷದ ವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೇ 180 ದಿನದ ಒಳಗಾಗಿ ಠೇವಣಿದಾರರ ಹಣ ವಾಪಸ್ ಕೊಡಿಸಲು ಅವಕಾಶವಿದೆ ಎಂದು ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುಗ್ರಿವಾಜ್ಞೆ ಜಾರಿಗೊಳಿಸಲು ರಾಜ್ಯ ಸರ್ಕಾರ ತಕ್ಷಣವೇ ಸಕ್ಷಮ ಪ್ರಾಧಿಕಾರ ರಚಿಸಿ, ಎಐಎಂ ಮುಖ್ಯಸ್ಥ ತನ್ನ ಹೆಸರು ಹಾಗೂ ಬೇನಾಮಿಯಾಗಿ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. 180 ದಿನದಲ್ಲಿ ಹೂಡಿಕೆದಾರರ ಹಣ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಪ್ರಕರಣಗಳ ಇತ್ಯರ್ಥಕ್ಕೆ ಸುಗ್ರೀವಾಜ್ಞೆಯ ಕಲಂ 8ರ ಪ್ರಕಾರ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.
ಈ ರೀತಿಯ ಹೆಚ್ಚಿನ ಬಡ್ಡಿ ಭರವಸೆ ನೀಡಿ ಹಣ ಸಂಗ್ರಹಿಸುವ ಕಂಪನಿಗಳ ಮೇಲೆ ನಿಗಾ ಇಡಲು ಹಿರಿಯ ಅಧಿಕಾರಿಯನ್ನು ನೇಮಿಸಿ, ಸ್ವತಃ ಮುಖ್ಯಮಂತ್ರಿ ಮೇಲುಸ್ತುವಾರಿ ನೋಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು ಎಂದು ಎಚ್.ಕೆ. ಪಾಟೀಲ್ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.