ವಿಧಾನ ಪರಿಷತ್ತು: “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ನೀಡುವ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಸದನದಲ್ಲಿ ನೆರೆ ಹಾವಳಿ ಕುರಿತ ಚರ್ಚೆಯಲ್ಲಿ ಪ್ರತಿಪಕ್ಷದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಪ್ರತಿ ಐದು ವರ್ಷಗಳಿಗೊಮ್ಮೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿ ನೀಡುವ ಪರಿಹಾರದ ಮೊತ್ತ ಪರಿಷ್ಕರಣೆ ಆಗುತ್ತದೆ. ಆದಾಗ್ಯೂ ಪ್ರಸ್ತುತ ನೀಡುತ್ತಿರುವ ಅನುದಾನ ಕಡಿಮೆ. ಹಾಗಾಗಿ, ಆ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪೂರಕ ಸ್ಪಂದನೆ ದೊರೆಯುವ ವಿಶ್ವಾಸ ಇದೆ’ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಸವರಾಜ ಇಟಗಿ, 2005ರಿಂದಲೂ ಎನ್‌ಡಿಆರ್‌ಎಫ್ ಒಂದೇ ಮಾದರಿಯ ಮಾರ್ಗಸೂಚಿ ಅನುಸರಿಸುತ್ತಿದ್ದು, ಅದೇ ರೀತಿ ಪರಿಹಾರ ನೀಡುತ್ತಿದೆ. ಆದರೆ, ಕಳೆದ ಒಂದೂವರೆ ದಶಕದಲ್ಲಿ ಕಟ್ಟಡಗಳ ಮಾರ್ಗಸೂಚಿ ದರ, ಮಾರುಕಟ್ಟೆ ದರ ಸೇರಿದಂತೆ ಎಲ್ಲವೂ ಸಾಕಷ್ಟು ಏರಿಕೆ ಆಗಿದೆ. ಆದ್ದರಿಂದ ಎನ್‌ಡಿಆರ್‌ಎಫ್ ಮೂಲಕ ನೀಡುವ ಅನುದಾನವನ್ನೂ ಪರಿಷ್ಕರಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಆಡಳಿತ ಪಕ್ಷದ ಗಮನಸೆಳೆದರು.
ಆಗ ಪ್ರತಿಕ್ರಿಯಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗುತ್ತಿದೆ. ಕಳೆದ 15 ವರ್ಷಗಳಲ್ಲಿ ಹಲವು ಬಾರಿ ಇದು ಪರಿಷ್ಕರಣೆ ಆಗಿದೆ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಪರಿಷತ್ತಿನ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, “ಅನೇಕ ಬಾರಿ ಪರಿಷ್ಕರಣೆ ಮಾಡಿದ್ದರೂ ಈಗ ಇಡೀ ದೇಶಕ್ಕೆ ಆಗಿರುವುದು ನಮ್ಮ ರಾಜ್ಯಕ್ಕೆ ಆಗಿದೆ. ಹಾಗಾಗಿ, ಈ ವರ್ಷ ಮಾತ್ರ ಪರಿಹಾರವನ್ನು ಸ್ವಲ್ಪ ಹೆಚ್ಚು ಕೊಡಿ ಎಂದು ಯಾಕೆ ಕೇಳಬಾರದು? ಬೇಕಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಹೋಗಿ, ನೆರೆಯ ತೀವ್ರತೆ ಬಗೆ ಮನವರಿಕೆ ಮಾಡಿಕೊಡೋಣ’ ಎಂದು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಪರಿಹಾರ ಮೊತ್ತ ಹೆಚ್ಚಿಸುವಂತೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಸೂಕ್ತ ಸ್ಪಂದನೆ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.