ರಾಯಚೂರು: ನೂತನ ರಾಯಚೂರು ವಿಶ್ವವಿದ್ಯಾಲಯವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಬೇಕಾದ ಅಗತ್ಯ
ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ಪತ್ರ ಚಳವಳಿ ನಡೆಸಿದರು.
ನಗರದ ಸೇವಾ ಸಮಾಜ ಕಾರ್ಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ
ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಮಿತಿ ಮುಖಂಡ ಡಾ| ರಜಾಕ ಉಸ್ತಾದ್ ಮಾತನಾಡಿ, ರಾಜ್ಯ ವಿಶ್ವವಿದ್ಯಾಲಯಗಳ ಅಧಿ ನಿಯಮ 2017ಕ್ಕೆ ರಾಜ್ಯಪಾಲರು ಅಂಕಿತ ಹಾಕದ ಕಾರಣ ರಾಯಚೂರು ಹೊಸ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಶುರುವಾಗುತ್ತಿಲ್ಲ. ಜಿಲ್ಲೆಗೆ ಹೊಸ ವಿವಿ ಘೋಷಿಸಿ ವರ್ಷ ಕಳೆದರೂ ಅನುಷ್ಠಾನ ಮಾತ್ರ ಆಗುತ್ತಿಲ್ಲ. ಇದರಿಂದ ಹೆಸರಿಗಷ್ಟೇ ವಿವಿ ಎನ್ನುವಂತಾಗಿದ್ದು, ಉನ್ನತ ವ್ಯಾಸಂಗಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಯಚೂರು ವಿಶ್ವವಿದ್ಯಾಲಯಕ್ಕೆ ಬೇಕಾದ ಅನುದಾನ, ಮೂಲ ಸೌಲಭ್ಯ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ ಸೇರಿ ಇತರೆ ವಿಷಯಗಳಲ್ಲಿ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಕಳೆದ ಮಾರ್ಚ್‌ನಲ್ಲಿ ವಿವಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಆದರೆ, ಆರು ತಿಂಗಳಾದರೂ ರಾಜ್ಯಪಾಲರು ಅದಕ್ಕೆ ಅನುಮೋದನೆ
ನೀಡದಿರುವುದು ವಿಪರ್ಯಾಸ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು
ಎಚ್ಚರಿಸಿದರು.
ಪ್ರಾಚಾರ್ಯ ಡಾ| ಶರಣಬಸವ ಪಾಟೀಲ, ಮುಖಂಡರಾದ ಹಜುಲ್ಲಾ, ಪಿ.ಬಸವರಾಜ, ಈರಣ್ಣ ಬೆಂಗಾಲಿ, ಎಂ.ಜಿ.ಮಾಲ್ಲಾ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.