Advertisement

ಪತ್ರ ಚಳವಳಿ-ಸಹಿ ಸಂಗ್ರಹ ಆಂದೋಲನ ಹೆಜ್ಜೆ

12:41 PM Jun 17, 2019 | Suhan S |

ಹುಬ್ಬಳ್ಳಿ: ಸಾರಿಗೆ ನೌಕರರನನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವ ಬೇಡಿಕೆ ಅಭಿಯಾನ ರೂಪ ಪಡೆದುಕೊಂಡಿದ್ದು, ತಮ್ಮ ಹಕ್ಕು ಪಡೆಯಲು ಇದೀಗ ಸರಕಾರದ ಮೇಲೆ ತೀವ್ರ ಒತ್ತಡ ಹೇರಲು ಪತ್ರ ಚಳವಳಿ, ಸಹಿ ಸಂಗ್ರಹ ಆಂದೋಲನಕ್ಕೆ ಸಾರಿಗೆ ನೌಕರರು ಅಣಿಯಾಗಿದ್ದಾರೆ.

Advertisement

ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬುದು ಸಾರಿಗೆ ನೌಕರರ ಹಳೆಯ ಬೇಡಿಕೆ. ಯಾವ ಸಂಘಟನೆಗಳು ಈ ಬೇಡಿಕೆ ಕುರಿತು ಅಷ್ಟೊಂದಾಗಿ ಒತ್ತು ನೀಡಿರಲಿಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಯಾದರೆ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಈ ಬೇಡಿಕೆಗೆ ಮರು ಜೀವ ಬಂದಂತಾಗಿದ್ದು, ಇದೀಗ ಅಭಿಯಾನ ರೂಪ ಪಡೆದಿದೆ. ರಾಜ್ಯದ ನಾಲ್ಕೂ ನಿಗಮಗಳ ನೌಕರರು ಪತ್ರ ಚಳವಳಿ, ಸಹಿ ಸಂಗ್ರಹ ಆಂದೋಲನಕ್ಕೆ ಮುಂದಾಗಿದ್ದಾರೆ.

ಸಿದ್ಧಗೊಂಡ ವೇದಿಕೆ: ಇದಕ್ಕಾಗಿಯೇ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಮಾರ್ಗದರ್ಶನದಲ್ಲಿ ಕೆಎಸ್‌ಆರ್‌ಟಿಸಿ ನಿಗಮಗಳ ನೌಕರರ ಮೂಲಭೂತ ಹೋರಾಟ ವೇದಿಕೆ ರಚನೆಯಾಗಿದೆ. ಮೂರು ವರ್ಷದ ಹಿಂದೆ ಜನ್ಮ ತಾಳಿದ ವೇದಿಕೆ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಭರವಸೆಯಿಂದ ಮತ್ತಷ್ಟು ಚುರುಕುಕೊಂಡಿದ್ದು, ಒಂದೇ ವರ್ಷದಲ್ಲಿ 32 ಸಾವಿರ ನೌಕರರು ಸದಸ್ಯತ್ವ ನೋಂದಾಯಿಸಿದ್ದಾರೆ. ಅಧಿಕಾರಿಗಳು ಹಾಗೂ ಕಾರ್ಮಿಕರು ಒಗ್ಗೂಡಿಕೊಂಡಿರುವ ವೇದಿಕೆ ಇದಾಗಿದ್ದು, ಈ ಬೇಡಿಕೆಗೆ ನೇರವಾಗಿ ಆಡಳಿತ ವರ್ಗ ಸಹಕಾರ ನೀಡಿದೆ. ಇದು ನಮ್ಮ ಬೇಡಿಕೆಯಲ್ಲ, ನಮ್ಮ ಹಕ್ಕು ಎಂಬುದು ವೇದಿಕೆಯ ಚಿಂತನೆಯಾಗಿದೆ.

ಹೀಗಿದೆ ಹೋರಾಟ: ಕಳೆದ ಒಂದು ವರ್ಷದಿಂದ ಸುಮಾರು 100ಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಲಿಖೀತವಾಗಿ ಮನವಿ ಮಾಡಿದ್ದಾರೆ. ಎರಡನೇ ಭಾಗವಾಗಿ ಪತ್ರ ಚಳವಳಿ ಆರಂಭಿಸಿದ್ದು, ಘಟಕ, ವಿಭಾಗ ಕಚೇರಿಗಳ ಹಂತದಲ್ಲಿ ನೇರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಚಳವಳಿ ಆರಂಭವಾಗಿದೆ. ಆಂತರಿಕವಾಗಿ ನಡೆಯುತ್ತಿರುವುದರಿಂದ ಬಹುತೇಕ ನೌಕರರು ಪತ್ರ ಚಳವಳಿ ಬೆಂಬಲಿಸಿದ್ದಾರೆ. 1.50 ಲಕ್ಷ ನೌಕರರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಪಣ ತೊಟ್ಟಿದ್ದು, ಮುಂದಿನ ಹಂತದಲ್ಲಿ ನೌಕರರೆಲ್ಲರೂ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಿತ್ಯವೂ ಕೆಲಸ ಮಾಡುವುದಾಗಿ ನಿರ್ಧರಿಸಲಾಗಿದೆ. ಸರಕಾರ ಸಾರಿಗೆ ಸಂಸ್ಥೆಗಳನ್ನು ಕಡೆಗಣಿಸುತ್ತಿರುವುದರ ಪರಿಣಾಮವೇ ಈ ಅಭಿಯಾನ ಆರಂಭಗೊಂಡಿದೆ.

ಇತರೆ ಸಂಘಟನೆಗಳು ಸಿದ್ಧ: ಏಕೈಕ ಬೇಡಿಕೆಯಿಟ್ಟುಕೊಂಡ ಕಾರ್ಯಪ್ರವೃತ್ತವಾದ ವೇದಿಕೆಯ ಹೋರಾಟಕ್ಕೆ ಇದೀಗ ಹಲವು ಸಂಘ ಸಂಸ್ಥೆಗಳು, ಸಾಹಿತಿಗಳು ಬೆಂಬಲ ಸೂಚಿಸಿದ್ದಾರೆ. ಇದೇ ಮಾದರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನ ಬೆಂಗಳೂರು ಭಾಗದಲ್ಲಿ ಬೃಹತ್‌ ಸಹಿ ಸಂಗ್ರಹ ಆಂದೋಲನಕ್ಕೆ ಮುಂದಾಗಿದೆ. ಕರವೇ ರಾಜ್ಯಾಧ್ಯಕ್ಷ ಕೆ.ನಾರಾಯಣಗೌಡ ಅವರ ಬೆಂಬಲವೂ ದೊರೆತಿದೆ. ಒಂದೇ ಬೇಡಿಕೆಗೆ ಶ್ರಮಿಸುತ್ತಿರುವ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಬೃಹತ್‌ ಹೋರಾಟ ಆರಂಭಿಸುವ ಚಿಂತನೆ ಮುಖಂಡರಲ್ಲಿದೆ.

Advertisement

ಹೋರಾಟಕ್ಕೆ ಇಮ್ಮಡಿ: ಸಾರಿಗೆ ನೌಕರರನ್ನು ಸರಕಾರಿ ನೌಕಕರರೆಂದು ಪರಿಗಣಿಸಲು ಅಸಾಧ್ಯ ಎನ್ನುವ ಅಭಿಪ್ರಾಯಗಳಿದ್ದವು. ಆದರೆ ಪಕ್ಕದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನರೆಡ್ಡಿ ಅಧಿಕಾರ ವಹಿಸಿಕೊಂಡು ವಾರದಲ್ಲೇ ಅಲ್ಲಿನ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಅಧಿಕೃತ ಘೋಷಣೆ ಮಾಡಿರುವುದು ಹೋರಾಟ ಇಮ್ಮಡಿಗೊಳಿಸಿದೆ. ಆಂಧ್ರದಲ್ಲಾದ ಬದಲಾವಣೆಯನ್ನೇ ಉದಾಹರಣೆಯಾಗಿಟ್ಟುಕೊಂಡು ನೌಕರರನ್ನು ಹೊರಾಟಕ್ಕೆ ಅಣಿಗೊಳಿಸಲಾಗುತ್ತಿದೆ.

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next