ಬೆಂಗಳೂರು: ಕೋವಿಡ್-19 ಲಾಕ್‌ಡೌನ್‌ನಿಂದ ಕತಾರ್‌ನಲ್ಲಿ ಸಿಲುಕಿರುವ ಕನ್ನಡಿಗರು ರಾಜ್ಯಕ್ಕೆ ವಾಪಸ್ ಬರಲು ವಂದೇ
ಭಾರತ ಮಿಷನ್ ಅಡಿಯಲ್ಲಿ ವಿಮಾನ ಸೇವೆಯನ್ನು ಕಲ್ಪಿಸಿಕೊಡುವಂತೆ ಕತಾರ್ ಕನ್ನಡ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರ ಮೇ 22 ರಂದು “ವಂದೇ ಭಾರತ ಮಿಷನ್ ಅಡಿಯಲ್ಲಿ ದೋಹಾದಿಂದ ಬೆಂಗಳೂರಿಗೆ ಪ್ರತ್ಯೇಕ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಆ ನಂತರ ಯಾವುದೇ ವಿಮಾನ ಸೇವೆ ಕಲ್ಪಿಸದೇ ಇರುವುದರಿಂದ ಸಾಕಷ್ಟು ಜನರು ದೇಶಕ್ಕೆ ಬರಲು ಕಾಯುತ್ತಿದ್ದಾರೆ. ಆದರೆ, ಇದುವರೆಗೂ ಕತಾರ್ ನಿಂದ ಬೆಂಗಳೂರು ಹಾಗೂ ಮಂಗಳೂರಿಗೆ ವಿಮಾನ ಸೇವೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಕತಾರ್ ನಲ್ಲಿ ಕೋವಿಡ್-19 ಮಹಾಮಾರಿಯ ಇನ್ನೂ ಹೆಚ್ಚುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡು ಕಷ್ಟಪಡುತ್ತಿದ್ದಾರೆ. ಕೆಲವರು ಅನಾರೋಗ್ಯ ಪೀಡಿತರಾಗಿದ್ದಾರೆ, ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ ಅಂಗಡಿ, ನಳಿನ್ ಕುಮಾರ್ ಕಟೀಲ್ ಅವರಿಗೂ ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ಆಗಮಿಸುವವರು ರಾಜ್ಯ ಸರ್ಕಾರದ ನಿರ್ದೇಶನದಂತೆ ಕ್ವಾರಂಟೈನ್ ವ್ಯವಸ್ಥೆಗೆ ಒಪ್ಪಿಕೊಳ್ಳಲಿದ್ದಾರೆ ಎಂದು ಭಾರತ ಸಮುದಾಯ ಹಿತೈಷಿ ವೇದಿಕೆಯ ಕರ್ನಾಟಕ ಪ್ರತಿನಿಧಿಗಳಾದ ಮಹೇಶ್ ಗೌಡ, ಸುಬ್ರಮಣ್ಯ ಹೆಬ್ಟಾಗಿಲು, ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷ ನಾಗೇಶ್‌ರಾವ್ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಕತಾರ್ ಕನ್ನಡ ಸಂಘದ ವತಿಯಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ವಾಪಸ್ ರಾಜ್ಯಕ್ಕೆ ಕಳುಹಿಸಲು ಖಾಸಗಿ ವಿಮಾನ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಮಂಗಳೂರು ಹಾಗೂ ಬೆಂಗಳೂರಿಗೆ ವಿಮಾನ ಸೇವೆ ಕಲ್ಪಿಸಲು ಅನುಮತಿ ನೀಡುವಂತೆಯೂ ಮನವಿ ಮಾಡಿದ್ದಾರೆ.