ದಾವಣಗೆರೆ: ಮಕ್ಕಳಲ್ಲಿ ಅಡಗಿರುವ ಸೃಜನಶೀಲ ಶಕ್ತಿಯನ್ನು ಪೋಷಿಸುವ ಕೆಲಸ ಆಗಬೇಕಿದೆ ಎಂದು ಮಾಜಿ ಸಚಿವೆ ಡಾ| ನಾಗಮ್ಮ ಕೇಶವಮೂರ್ತಿ ಹೇಳಿದ್ದಾರೆ. ಶುಕ್ರವಾರ, ಪಿ.ಜೆ. ಬಡಾವಣೆ ವನಿತಾ ಸಮಾಜದ ಶ್ರೀ ಸತ್ಯಸಾಯಿ ರಂಗಮಂದಿರದಲ್ಲಿ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಮೇಳ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲೂ ತನ್ನದೇ ಅದ ಪ್ರತಿಭೆ, ಆಸಕ್ತಿ ಇರುತ್ತದೆ. ಅಂತಹ ಆಸಕ್ತಿ ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕು ಎಂದರು.
ಇಂದಿನ ಮಕ್ಕಳ ಮೇಳದಲ್ಲಿ ವಿವಿಧ ಶಾಲೆಗಳಿಂದ ಮಕ್ಕಳು ಭಾಗವಹಿಸಿದ್ದಾರೆ. ಬಹುತೇಕ ಇವರು ಬಡತನ ಕುಟುಂಬದ
ಮಕ್ಕಳಾಗಿದ್ದು, ಆ ಮಕ್ಕಳು ತಮ್ಮಲ್ಲಿರುವ ಸೃಜನಶೀಲ ಕಲೆಯಿಂದ ಕಸದಿಂದ ರಸ ಎಂಬ ಘೋಷವಾಕ್ಯದಡಿ ಅತ್ಯದ್ಭುತ ಕಲಾಕೃತಿಗಳು, ವಸ್ತುಗಳನ್ನು ತಯಾರಿಸಿರುವುದು ಅವರ ಪ್ರತಿಭೆಗೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್ ಮಾತನಾಡಿ, ಶಿಕ್ಷಕ ವಿದ್ಯಾರ್ಥಿ ಬಗ್ಗೆ ನಿರ್ಲಕ್ಷಿಸಿದರೆ ದೇಶದ ಸಂಪತ್ತಾದ ಇಡೀ ಯುವಪೀಳಿಗೆ ಹಾಳಾಗುತ್ತದೆ. ಹಾಗಾಗಿ ದೇಶದ ಆಸ್ತಿಯಾಗಿರುವ ಮಕ್ಕಳ ಬಗ್ಗೆ ಪೋಷಕರು, ಶಿಕ್ಷಕರು ತಾತ್ಸಾರ ತೋರದೇ ಅವರ ಆಸಕ್ತಿ ಗುರ್ತಿಸಿ ಪೋಷಿಸಬೇಕು. ಬಾಲ್ಯದಲ್ಲೇ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದರು.
ಮಕ್ಕಳು ಮೈದಾನದಲ್ಲಿ ಆಟ ಬಿಟ್ಟು ಮೊಬೈಲ್‌ನಲ್ಲಿ ಗೇಮ್ ಆಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಮ್ಮ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಮೊದಲು ಟಿವಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿರಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದು ಹೇಳಿದರು.
ಪಾಲಿಕೆ ಮತ್ತೋರ್ವ ಸದಸ್ಯ ಶಿವನಳ್ಳಿ ರಮೇಶ್ ಮಾತನಾಡಿ, ನಾಗಮ್ಮನವರು ವನಿತಾ ಸಮಾಜ ಸೇರಿದಂತೆ ವಿವಿಧ ಅಂಗಸಂಸ್ಥೆಗಳನ್ನು ಸ್ಥಾಪಿಸಿ ಸಾಕಷ್ಟು ಅನಾಥ ಮಕ್ಕಳ, ವೃದ್ಧರ ಪಾಲಿಗೆ ಆಶಾಕಿರಣ ಆಗಿದ್ದಾರೆ. ಅವರು ದಾವಣಗೆರೆಯಲ್ಲಿ ಮಾಡಿರುವ ಸಮಾಜ ಸೇವೆ ಅನನ್ಯ ಎಂದು ಬಣ್ಣಿಸಿದರು.
ಇದೇ ವೇಳೆ ಪ್ರೇಮಾಲಯದ ಸದಸ್ಯೆ ಅನಿತಾ ವಿರೂಪಾಕ್ಷಪ್ಪಗೆ ಶಿಶು ಸೇವಾ ಪ್ರಶಸ್ತಿ ಹಾಗೂ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಚ್.ಬಿ. ಸಹನಗೆ ವರ್ಷದ ಉತ್ತಮ ಪ್ರೌಢಶಾಲೆ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಾಯಿತು. ನಳಿನಿ ಅಚ್ಯುತ್, ಶೀಲಾ ನಲ್ಲೂರು ಉಪಸ್ಥಿತರಿದ್ದರು. ಪ್ರೇಮಾಲಯದ ಮಕ್ಕಳು ಪ್ರಾರ್ಥಿಸಿದರು. ಪ್ರೇಮಾ ನಾಗರಾಜ್ ಸ್ವಾಗತಿಸಿದರು. ಮಮತಾ ವೆಂಕಟೇಶ್ ವಂದಿಸಿದರು.
ಸಿ.ಕೇಶವಮೂರ್ತಿ ವಾಕ್ ಶ್ರವಣ ಕೇಂದ್ರದ ಸಾಹಸ್ ಹಾಗೂ ಸಿ. ಕೇಶವಮೂರ್ತಿ ವೃತ್ತಿ ತರಬೇತಿ ಕೇಂದ್ರದ ವಿಮೋಚನಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.