ಪುತ್ತೂರು: ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕೆಲಸ ಇನ್ನಷ್ಟು ಆಗಬೇಕು. ಈ ನಿಟ್ಟಿನಲ್ಲಿ ನಾಯಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚು ಜವಾಬ್ದಾರಿ ಇದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷ ಸಂಘಟನೆ ಎನ್ನುವುದು ಚುನಾವಣೆಗೆ ಮಾತ್ರ ಸೀಮಿತವಾಗದೆ ನಿರಂತರ ಪ್ರಕ್ರಿಯೆಯಾಗಬೇಕು. ದೇಶಕ್ಕೆ ಉತ್ತಮ ನಾಯಕತ್ವ ನೀಡಿದ ಕಾಂಗ್ರೆಸ್ ದೇಶದ ಪ್ರಗತಿಯಲ್ಲಿ ನಿರಂತರವಾಗಿ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಪಕ್ಷ ಎಲ್ಲ ಹಂತಗಳಲ್ಲಿ ಅಧಿಕಾರಕ್ಕೇರುವಂತೆ ಮಾಡುವಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು ಎಂದು ಹೇಳಿದರು.
ಪಕ್ಷದ ಸಂದೇಶದಂತೆ ನನ್ನನ್ನು ಒಮ್ಮತದಿಂದ ಕಾರ್ಯಕರ್ತರು ಬೆಂಬಲಿಸಿ ಶ್ರಮಿಸಿದ್ದಾರೆ, ಮನೆಗೆ ಮುಟ್ಟಿಸಿದ್ದಾರೆ. ಫಲಿತಾಂಶ ಯಾವ ರೀತಿ ಬರುತ್ತದೆ ಎನ್ನುವುದು ಮುಖ್ಯವಲ್ಲ. ಆದರೆ ಪಕ್ಷದ ಜತೆ ನಾವೆಲ್ಲ ಇದ್ದೇವೆ. ಕಾರ್ಯಕರ್ತರ ಜತೆಗಿದ್ದು, ಅವರ ಅಹವಾಲು, ಸಮಸ್ಯೆಗಳಿಗೆ ಹಾಗೂ ಪಕ್ಷದ ನಾಯಕತ್ವದ ಜತೆ ಕೊಂಡಿಯಾಗಿ ಕೆಲಸ ಮಾಡುತ್ತಾ ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ ಎಂದು ಮಿಥುನ್ ರೈ ಭರವಸೆ ನೀಡಿದರು.
ಶ್ರಮಕ್ಕೆ ಫಲ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪಕ್ಷದ ಅಭ್ಯರ್ಥಿಯ ಗೆಲುವಿ ಗಾಗಿ ನಿರಂತರವಾಗಿ ಶ್ರಮ ವಹಿಸುತ್ತಿರುವ ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿಗಳು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಪಕ್ಷದ ಮುಖಂಡರಾದ ಎಂ.ಬಿ. ವಿಶ್ವನಾಥ ರೈ, ಕೃಷ್ಣ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.