Advertisement

ಸುಮಲತಾ ಸ್ವಾಭಿಮಾನದ ಅರ್ಥ ತಿಳಿಯಲಿ: ನಿಖೀಲ್ಕುಮಾರ್‌ ಟೀಕೆ

01:57 PM Apr 25, 2019 | Team Udayavani |

ಮಂಡ್ಯ: ಸ್ವಾಭಿಮಾನಕ್ಕೆ ಮತ ಹಾಕಿ ಎಂದು ಹೇಳುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನದ ಅರ್ಥ ತಿಳಿದು ಮಾತನಾಡಲಿ ಎಂದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಅಭ್ಯರ್ಥಿ ಕೆ.ನಿಖೀಲ್ ಸವಾಲು ಹಾಕಿದರು.

Advertisement

ನಗರದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌ ನಿವಾಸದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಾನು ನಾಮಪತ್ರ ಸಲ್ಲಿಸುವ ದಿನ ಒಂದೂವರೆ ಲಕ್ಷದಿಂದ ಎರಡು ಲಕ್ಷ ಜನರು ಸೇರಿದ್ದರು. ಆ ಜನರನ್ನು ನೋಡಿ ಒಂದು ಸಾವಿರ , ಎರಡು ಸಾವಿರ ರೂ. ಹಣ ಕೊಟ್ಟು ಜನರನ್ನು ಕರೆತಂದಿದ್ದಾರೆ ಎಂದು ಮಾತನಾಡಿದರು. ಅಂದರೆ, ಜನರನ್ನೇ ಇವರು ಹಣಕ್ಕಾಗಿ ಮಾರಾಟ ಮಾಡಿ ಕೊಳ್ಳುವರು ಎಂದು ಹೇಳುತ್ತಾ ಮತ್ತೆ ಅದೇ ಜನರನ್ನು ಸ್ವಾಭಿಮಾನಕ್ಕೆ ಮತ ಹಾಕಿ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ. ಜನರ ಸ್ವಾಭಿಮಾನ ಅವರೇ ಕಳೆದಂತಲ್ಲವೇ ಎಂದು ಪ್ರಶ್ನಿಸಿದರು.

ಯಾವ ರೀತಿ ಟಾರ್ಗೆಟ್: ರಾಜಕಾರಣದಲ್ಲಿ ಜೆಡಿಎಸ್‌ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ನಾವು ಯಾರನ್ನು, ಯಾವ ರೀತಿ ಟಾರ್ಗೆಟ್ ಮಾಡಿದ್ದೇವೆ ಅನ್ನೋದನ್ನ ಬಿಡಿಸಿ ಹೇಳಲಿ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರಿಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಅದರ ಬಗ್ಗೆ ಯೋಚನೆ ಮಾಡುವುದಕ್ಕೂ ಅವರಿಗೆ ಪುರುಸೊತ್ತಿಲ್ಲ. ಸುಮ್ಮನೆ ಟಾರ್ಗೆಟ್ ಮಾಡ್ತಿದ್ದೇವೆ ಅಂತ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ ಎಂದು ಹೇಳಿದರು.

ಜನರು ಕೈಬಿಡಲ್ಲ: ಫ‌ಲಿತಾಂಶದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಏಕೆಂದರೆ, ನಾನು ತಳಮಟ್ಟದಿಂದ ಜನಾಭಿಪ್ರಾಯ ಸಂಗ್ರಹಿಸಿರುವಂತೆ ಜಿಲ್ಲೆಯ ಜನರು ಅಷ್ಟು ಸುಲಭವಾಗಿ ದೇವೇಗೌಡರ ಕುಟುಂಬವನ್ನು ಕೈಬಿಡುವು ದಿಲ್ಲ. ನನಗೂ ಒಂದು ಅವಕಾಶ ಮಾಡಿಕೊಡುತ್ತಾರೆ ಎಂಬ ಅಚಲ ನಂಬಿಕೆ ಇದೆ. ಆದರೂ ಮಾಧ್ಯಮಗಳು ಒಂದು ಚೆಕ್‌ ಇಟ್ಟಿದ್ದೀರಿ. ಅದು ಮೇ 23ರಂದು ಬಹಿರಂಗ ವಾಗಲಿದೆ ಎಂದು ಹೇಳಿದರು.

ಫ‌ಲಿತಾಂಶ ಬರಲಿ: ಗ್ರಾಮೀಣಾಭಿವೃದ್ಧಿ ನನ್ನ ತಂದೆಯವರ ಕನಸು. ಅದೇ ಕಾರಣಕ್ಕೆ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಈಗಾಗಲೇ 8500 ಕೋಟಿ ರೂ. ಹಣ ನೀಡಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನಪರಿಷತ್‌ ಸದಸ್ಯರ ಜೊತೆ ಸೇರಿಕೊಂಡು ಅದನ್ನು ಅನುಷ್ಠಾನ ಗೊಳಿಸುವುದು. ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದುಕೊಂಡಿದ್ದೇನೆ. ಮೊದಲು ಫ‌ಲಿತಾಂಶ ಹೊರಬರಲಿ. ಆನಂತರ ನನ್ನ ಕನಸುಗಳನ್ನೆಲ್ಲಾ ನಿಮ್ಮೆದುರು ಬಿಚ್ಚುಡುತ್ತೇನೆ ಎಂದರು.

Advertisement

ಸವಾಲು ಎದುರಿಸಿದ ಖುಷಿ: ಈ ಚುನಾವಣೆಯನ್ನು ದೊಡ್ಡ ಸವಾಲಾಗಿ ಎದುರಿಸಿರುವುದಕ್ಕೆ ಖುಷಿಯಾಗುತ್ತಿದೆ. ಏಕೆಂದರೆ, ಸುಲಭವಾಗಿ ನಾನು ಗೆದ್ದು ಬಿಟ್ಟಿದ್ದರೆ ನನಗೆ ಜನರಿಂದ ಇಷ್ಟೊಂದು ಗೌರವ-ಮರ್ಯಾದೆ ಸಿಗುತ್ತಿರಲಿಲ್ಲ. ನಾನೂ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ಕಷ್ಟ ಪಟ್ಟಿದ್ದಾರೆ. ಇದೊಂದು ಅದ್ಭುತ ಅನುಭವ. ಗ್ರಾಮ ಗ್ರಾಮಗಳಿಗೆ ಹೋಗಿ ಜನರ ಅಭಿಪ್ರಾಯ ತಿಳಿದು ಬಂದಿರುವುದು ವಿಶಿಷ್ಟ ಅನುಭವ ನೀಡಿದೆ ಎಂದು ನಿಖೀಲ್ ಚುನಾವಣಾ ಪ್ರಚಾರದಲ್ಲಿ ದೊರೆತ ಅಭಿಮಾನ, ಅನುಭವಗಳನ್ನು ಸ್ಮರಿಸಿಕೊಂಡರು.

ನಾನು ಮಂಡ್ಯದಲ್ಲಿ ಜಮೀನು ಖರೀದಿಸಿ ತೋಟದ ಮನೆ ಮಾಡಬೇ ಕೆಂದಿರುವುದು ನಿಜ. ಆದರೆ, ಅದು ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲ. ನಾಲ್ಕಾರು ತಿಂಗಳು ಬೇಕು. ನಾನು ಎಲ್ಲಿಯೂ ಹೋಗುವುದಿಲ್ಲ. ಇಲ್ಲೇ ಇರುತ್ತೇನೆ. ನಿಮಗೇನಾದರೂ ನನ್ನ ಬಗ್ಗೆ ಸಂಶಯವಿದೆಯಾ ಎಂದು ಮಾಧ್ಯಮ ದವರನ್ನು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಇತರರಿದ್ದರು.

ಬೆಟ್ಟಿಂಗ್‌ ಕಟ್ಟಬೇಡಿ: ನಿಖೀಲ್ ಮನವಿ

ಕಾಂಗ್ರೆಸ್‌ ಬೆಂಬಲದಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್‌ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಆ ಪಕ್ಷದ ಕೆಲವರು ಮೈತ್ರಿ ಧರ್ಮದಂತೆ ಜೆಡಿಎಸ್‌ ಪರವಾಗಿ ಬಂದು ಚುನಾವಣಾ ಕೆಲಸ ಮಾಡಿಲ್ಲ. ಅದಕ್ಕೆ ನಾವೇನೂ ಮಾಡಲಾಗುವುದಿಲ್ಲ. ಪಕ್ಷ ವಿರೋಧಿ ನಡೆ ವಿರುದ್ಧ ಆ ಪಕ್ಷದ ಹೈಕಮಾಂಡ್‌ ಕ್ರಮ ಕೈಗೊಳ್ಳಬೇಕೇ ಹೊರತು ನಮಗೆ ಆ ಅಧಿಕಾರವಿಲ್ಲ ಎಂದಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿಕೂಟ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಫ‌ಲಿತಾಂಶದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕೆಲವರು ಸರ್ಕಾರ ಬೀಳಿಸುವುದಕ್ಕೆ ತೊಂದರೆ ಕೊಡುತ್ತಿರಬಹುದು. ಬಿಜೆಪಿಯವರು ಬಹಳ ಹಿಂದಿನಿಂದಲೂ ಸರ್ಕಾರಕ್ಕೆ ಡೆಡ್‌ಲೈನ್‌ ಕೊಡುತ್ತಲೇ ಬಂದಿದ್ದಾರೆ. ಆದರೆ, ಏನೂ ಆಗೋಲ್ಲ. ಚುನಾವಣಾ ಫ‌ಲಿತಾಂಶದ ಬಗ್ಗೆ ಬೆಟ್ಟಿಂಗ್‌ ಕಟ್ಟುವುದು ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ, ಕ್ಷೇತ್ರದಲ್ಲಿ ಯಾರೂ ಬೆಟ್ಟಿಂಗ್‌ ಕಟ್ಟಬಾರದು. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next