ನಿನ್ನ ಮೇಲೆ ಭಾವಗೀತೆ ಬರೆಯಲೋ ಭಕ್ತಿಗೀತೆ ಬರೆಯಲೋ ಎಂಬ ದಲವೆನಗೆ.ಧ್ರುವತಾರೆಗಳನ್ನು ಎಣಿಸುತ್ತ,ಗ್ರಹ,ನಕ್ಷತ್ರ, ಸಪ್ತರ್ಷಿ ಮಂಡಲಗಳೊಂದಿಗೆ ವಿಜ್ಞಾನದ ಹೊರತಾಗಿ ಮಾತನಾಡಲು ಕಲಿಸಿದ್ದು ನೀನೇ ಅಲ್ಲವೇನು?
ನೀನು ನನ್ನ ಲೈಫಿಗೆ ಬಂದ ಮೇಲೆ, ನನ್ನ ಲೈಫೇ ಬೇರೆಯಾಯಿತು ಕಣೋ.ನನ್ನ ಬಾಳಿಗೆ ಬಲಗಾಲಿಟ್ಟೇ ಒಳಗೆ ಬಂದೆಯೇನೋ ಎಂಬಂತೆ,ಅವತ್ತಿನಿಂದ ನನಗೆ ಶುಭ ಶಕುನಗಳೇ.ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂದು ಹೇಳುವುದು ಯಾಕೋ ಸುಳ್ಳೆಂಬ ಅನುಮಾನವೆನಗೆ.ನನ್ನ ಯಶಸ್ಸಿನ ಹಿಂದಿರುವ ಯಶಸ್ವಿ ಪುರುಷ ನೀನೇ.ನಿನ್ನ ಹೆಸರನ್ನು ಬದಲಾಯಿಸುವ ಅವಕಾಶ ನೀಡಿದರೆ,ಮೂರು ಬಾರಿ ಕಿವಿಯಲ್ಲಿ ಯಶಸ್ವಿ ಎಂದು ಕೂಗಲೇನೋ ಗೆಳೆಯ?
ವಿಜ್ಞಾನ ಓದುವ ನಾನು ನಿನ್ನ ಕಂಡಾಗಲೇ ಕವನ, ಪತ್ರ ಬರೆಯಲು ಶುರುಮಾಡಿದ್ದು ಣೋ. ಪ್ರತಿಯೊಂದೂ ಆಶು ಕವನವೋ ಎಂಬಂತೆ ನನ್ನ ಕವನಗಳಿಗೆ ಅಂಕಿತನಾಮ ನೀನೇ.ಕಾವ್ಯನಾಮ ಯಾಕೆ ಬೇಕು ನಮ್ಮಿಬ್ಬರ ಪ್ರೇಮ ಕಾವ್ಯಕ್ಕೆ? ನನ್ನ ಪತ್ರಕ್ಕೆ ಉತ್ತರ ಬರೆದ ನಿನ್ನ ಶೈಲಿಯನ್ನು ಅನುಕರಿಸಿ ಪ್ರೇಮಪತ್ರ ಬರೆಯಲೂ ಶುರುಮಾಡಿದ ನನಗೆ ಪ್ರಬಂಧ ಬರೆಯಲು ಅದೇ ಸ್ಫೂರ್ತಿ ಕಣೋ.ಕಥೆ,ಕಾದಂಬರಿ ಬರೆಯುವ ಸಾಹಸ ಮಾಡುವ ಮುಂಚೆ ನನ್ನ ಲೇಖನಿಯನ್ನು ಹಾರಿಸಿಕೊಂಡು ಹೋಗಿಬಿಡು ಒಮ್ಮೆ,ನಿನ್ನ ಕಣ್ಣೋಟದಲ್ಲೇ ಹೊಸ ಕಥೆ ಹುಟ್ಟಿಬಿಡುವುದೇನೋ.
ಮರ,ಗಿಡ,ಪ್ರಾಣಿಪಕ್ಷಿಗಳ ಪ್ರಭೇದ ಕಾಣುತ್ತಿದ್ದ ನನಗೆ ಅವನ್ನು ಮುದ್ದಾಡಿ ಅದರ ಭಾಷೆಯಲ್ಲೇ ಅವುಗಳೊಂದಿಗೆ ಸಂವಹನ ಕಲಿಸಿದ್ದು ಮಾಮೂಲಿಯೇನು? ಅವುಗಳಲ್ಲಿಯೂ ಪ್ರೇಮಲೋಕ ತೋರಿಸಿದ ಕಿಶೋರ ನೀನು.
ಪ್ರಯೋಗ, ಫಲಿತಾಂಶ, ಆಮ್ಲ, ಪ್ರತ್ಯಾಮ್ಲ, ಟೆಸ್ಟ್ ಟ್ಯೂಬ್ ಎಂದು ವೈಜ್ಞಾನಿಕ ಲೋಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ವಾಸ್ತವಕ್ಕೆ ಕರೆತಂದವನೇ ನೀನು. ನಿನ್ನ ಮೇಲೆ ಭಾವಗೀತೆ ಬರೆಯಲೋ ಭಕ್ತಿಗೀತೆ ಬರೆಯಲೋ ಎಂಬ ಗೊಂದಲವೆನಗೆ.ಧ್ರುವತಾರೆಗಳನ್ನು ಎಣಿಸುತ್ತ,ಗ್ರಹ,ನಕ್ಷತ್ರ, ಸಪ್ತರ್ಷಿ ಮಂಡಲಗಳೊಂದಿಗೆ ವಿಜ್ಞಾನದ ಹೊರತಾಗಿ ಮಾತನಾಡಲು ಕಲಿಸಿದ್ದು ನೀನೇ ಅಲ್ಲವೇನು.ಮತ್ತೇಕೆ ತಡ,ಎಂದಿನಂತೆ ಇಂದು ಕುಳಿತು ನಮ್ಮ ನಿತ್ಯದ ಮಾಮೂಲಿ ಜಾಗದಲ್ಲಿ ಆ ಹೊಸ ನಕ್ಷತ್ರದೊಂದಿಗೆ ಮಾತನಾಡಲು ಬಂದು ಬಿಡು ನನ್ನ ಯಶಸ್ವಿ.
ಇಂತಿ ನಿನ್ನ ಪ್ರೀತಿಯ,
ಸಾವಿತ್ರಿ ಶ್ಯಾನುಭಾಗ್