ನನ್ನ ನಿನ್ನ ನಡುವೆ ಮಾತು ನಿಂತು ಅದೆಷ್ಟು ದಿನಗಳಾದವು ಅಂತೇನಾದರೂ ನಿನಗೆ ಗೊತ್ತಾ ? ನಾವೇಕೆ ಮಾತಾಡುವುದನ್ನು ನಿಲ್ಲಿಸಿದೆವು ಎಂಬುದು ಗೊತ್ತಾ ? ಅಷ್ಟೊಂದು ಆತ್ಮೀಯತೆಯಿಂದಿದ್ದ ನಾವಿಬ್ಬರೂ ದೂರವಾದದ್ದು ಯಾಕೆ ಅಂತ ನಿನಗೆ ಗೊತ್ತಾ? ಯಾವುದೇ ಕಾರಣಕ್ಕೂ ನನ್ನ ನಿನ್ನ ಸ್ನೇಹ ಒಡೆಯಲಾರದಂತೆ ಗಟ್ಟಿಯಾಗಿದ್ದರೂ ನಾವಿಬ್ಬರೂ ದೂರವಾದೆವು. ಕಾರಣ ..? ತುಂಬಾ ಸಿಂಪಲ…. ಹಾಲಿನಂಥ ನಮ್ಮ ಸ್ನೇಹ ಕೆಡಲು ಒಂದು ಹನಿ ಹುಳಿ ಸಾಕಾಯ್ತು ಅಷ್ಟೇ. ಆ ಹನಿ ಹುಳಿಯನ್ನು ತಡೆಯದಾಯಿತೇ ನಮ್ಮ ಸ್ನೇಹ ಎಂಬುದೇ ನನಗೆ ಈಗಲೂ ಅರ್ಥವಾಗುತ್ತಿಲ್ಲ.
ನಂಬಿಕೆ-ವಿಶ್ವಾಸಗಳು ಸ್ನೇಹಕ್ಕೆ ಅತೀ ಮುಖ್ಯ. ನಮ್ಮಿಬ್ಬರ ನಡುವೆ ಗಾಢವಾದ ನಂಬಿಕೆ-ವಿಶ್ವಾಸ ಇದ್ದರೂ, ನಾವಿಬ್ಬರೂ ದೂರವಾದದ್ದು ವಿಪರ್ಯಾಸ.
ನಾವಿಬ್ಬರೂ ಈಗಲೂ ಮಾತನಾಡದೇ ದೂರವೇಕೆ ಇದ್ದೇವೆ? ಮತ್ತೆ ಯಾವ ಕಾರಣ ನಮ್ಮಿಬ್ಬರನ್ನು ದೂರ ಇಡುತ್ತಿದೆ ? ಎಲ್ಲವನ್ನೂ ಮರೆತುಬಿಡೋಣ. ನಮ್ಮ ನಮ್ಮ ನಂಬಿಕೆ ಇನ್ನಷ್ಟು ಗಾಢವಾಗಲಿ. ನಮ್ಮ ಸ್ನೇಹ ಮತ್ತಷ್ಟು ಗಟ್ಟಿಯಾಗಲಿ. ಅದು, ನಾವಿಬ್ಬರೂ ಮತ್ತೆ ಮನಬಿಚ್ಚಿ ಮಾತನಾಡುವುದರಿಂದ ಸಾಧ್ಯ. ಮುಂಬರುವ ದಿನಗಳಲ್ಲಿ ಇಂಥ ಕ್ಷುಲ್ಲಕ ಕಾರಣಗಳಿಗೆ ಗಮನಹರಿಸದೇ ಇರೋಣ. ಏನೇ ಅನುಮಾನಗಳಿದ್ದರೂ, ಮಾತಿನ ಮೂಲಕವೇ ಬಗೆಹರಿಸಿಕೊಂಡರಾಯ್ತು. ಅಲ್ಲವೇ?
ಯಾರದೋ ಮಾತಿಗೆ, ಯಾವುದೋ ಮಾತಿಗೆ ನಮ್ಮ ಅಮೂಲ್ಯವಾದ ಸ್ನೇಹವನ್ನು ಯಾಕೆ ಬಲಿಕೊಡಬೇಕು?
ನೀನು ಬಾ ಮತ್ತೆ ಮನದುಂಬಿ ಮಾತನಾಡೋಣ..!!
ವೆಂಕಟೇಶ ಚಾಗಿ, ಲಿಂಗಸುಗೂರ