Advertisement

ಬಾಲ ಕಾರ್ಮಿಕ ಮುಕ್ತ ಜಿಲ್ಲೆಗೆ ಶ್ರಮಿಸೋಣ: ನ್ಯಾ|ಸುಶಾಂತ

12:18 PM Apr 02, 2022 | Team Udayavani |

ಕಲಬುರಗಿ: ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು. ಮಕ್ಕಳ ಹಕ್ಕುಗಳನ್ನು ಕಾಪಾಡಲು ಎಲ್ಲರೂ ಸಾಂಘಿಕವಾಗಿ ಈ ಅನಿಷ್ಠ ಪದ್ಧತಿ ವಿರುದ್ಧ ಹೋರಾಡುವುದರ ಮೂಲಕ ಬಾಲ ಕಾರ್ಮಿಕ ಮುಕ್ತ ಜಿಲ್ಲೆಗೆ ಶ್ರಮಿಸಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ. ಚೌಗಲೆ ಕರೆ ನೀಡಿದರು.

Advertisement

ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಹೋಟೆಲ್‌ ಆಮಂತ್ರಣ ನೆಕ್ಸ್ಟ್ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ತಂಬಾಕು ನಿಷೇಧ ಕೋಶ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಂಯುಕ್ತಾಶ್ರಯದಲ್ಲಿ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ-2016’ರ ಕುರಿತು ಅನುಷ್ಠಾನಾಧಿಕಾರಿಗಳಿಗೆ (ಕಲಂ 16 ಮತ್ತು 17) ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಹೊಣೆಗಾರಿಕೆ ನೀಡಲಾಗಿದೆ. ಇದನ್ನರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸಬಹುದು. ಯಾವುದೇ ಬಾಲ ಕಾರ್ಮಿಕ ಪ್ರಕರಣ ದಾಖಲಿಸುವ ಮುನ್ನ ಬಾಲ ಕಾರ್ಮಿಕರ ಹಿನ್ನೆಲೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಬಾಲಕಾರ್ಮಿಕನಾಗಿರುವ ಬಗ್ಗೆ ಕಾರಣಗಳನ್ನು ಪತ್ತೆ ಹಚ್ಚಿ, ತದನಂತರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅನುಷ್ಠಾನ ಅಧಿಕಾರಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷ ಯಶವಂತ ವಿ. ಗುರುಕರ್‌ ಮಾತನಾಡಿ, ಜಿಲ್ಲೆಯಲ್ಲಿ ಇದೂವರೆಗೆ ಬಾಲಕಾರ್ಮಿಕ ಪ್ರಕರಣಗಳು ಎಷ್ಟು ದಾಖಲಾಗಿವೆ ಎಂಬುದನ್ನು ಅಂಕಿ-ಅಂಶ ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಬಾಲಾಕಾರ್ಮಿಕ ಪ್ರಕರಣ ಮಗುವಿನ ಭವಿಷ್ಯ ನಿರ್ಧಾರ ಮಾಡುತ್ತದೆ. ಪ್ರಕರಣ ದಾಖಲಿಸುವಾಗ ಪ್ರಕರಣದ ಹಿಂದೆ ಯಾವುದೇ ದೊಡ್ಡ ವ್ಯಕ್ತಿಗಳಿದ್ದರೂ, ಒತ್ತಡ ಹೇರಿದರೂ ಅಂಜದೆ, ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ದೊರಕಿಸಕೊಡಬೇಕು ಎಂದರು.

ನಗರ ಪೊಲೀಸ್‌ ಆಯುಕ್ತ ಡಾ| ವೈ. ಎಸ್‌.ರವಿಕುಮಾರ ಮಾತನಾಡಿ, ಬಾಲ್ಯ ಮಾನವನ ಜೀವನದ ಬಹುಮುಖ್ಯ ಹಂತ. ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯವನ್ನೇ ಕಿತ್ತುಕೊಳ್ಳುತ್ತದೆ. ಜೊತೆಗೆ ಮಕ್ಕಳ ದೈಹಿಕ, ಮಾನಸಿಕ ಹಾಗೂ ನೈತಿಕತೆ ಬೆಳವಣಿಗೆ ಮೇಲೆ ಹಾನಿ ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಬಾಲ ಕಾರ್ಮಿಕರು ಹೆಚ್ಚಿನ ಸಂಬಳ ಕೇಳುವುದಿಲ್ಲ. ಅಲ್ಲದೆ ಯಾವುದೇ ಬೇಡಿಕೆಯೂ ಇರುವುದಿಲ್ಲ. ಈ ಕಾರಣದಿಂದ ಅವರನ್ನೇ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಬಟ್ಟೆ ಅಂಗಡಿ, ಗ್ಯಾರೇಜ್‌ ಹಾಗೂ ಹೋಟೆಲ್‌ಗ‌ಳಲ್ಲಿ ಬಾಲ ಕಾರ್ಮಿಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನು ಅಧಿಕಾರಿಗಳು ನಿಯಂತ್ರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಯಲ್ಲಾಲಿಂಗ ಕಾಳನೂರ ಮಾತಾನಾಡಿ, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ, 1986 ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ ವಾರೆಂಟ್‌ ರಹಿತ ಬಂಧಿಸಬಹುದಾದ ಅಪರಾಧವಾಗಿದೆ ಎಂದರು.

ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಮಾತನಾಡಿ, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕಾಯ್ದೆ ಕಲಂ 16, 17ರಡಿ ನೇಮಕರಾದ ನಿರೀಕ್ಷಕರಿಗೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಡಾನ್‌ ಬಾಸ್ಕೋ ನಿರ್ದೇಶಕ ಫಾದರ್‌ ಟಾಮ್‌ ಕಿರ್ಯಾಕಲ್‌ ಮಕ್ಕಳ ಹಕ್ಕುಗಳ ಕುರಿತು, ಜಿಲ್ಲಾ ತಂಬಾಕು ನಿಷೇಧ ಕೋಶದ ಸುಜಾತಾ ಪಾಟೀಲ ಮತ್ತು ಡಾ| ವಿನೋದ ತಂಬಾಕು ನಿಷೇಧ ಕೋಟಾ³ ಕಾಯ್ದೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ್‌ ಇದ್ದರು. ಸಹಾಯಕ ಕಾರ್ಮಿಕ ಆಯುಕ್ತ ಅವಿನಾಶ ನಾಯ್ಕ ಸ್ವಾಗತಿಸಿದರು. ಕಲಬುರಗಿ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್‌ ವಂದಿಸಿದರು. ಎನ್‌.ಸಿ.ಎಲ್‌.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ನಿರೂಪಿಸಿದರು. ಪೊಲೀಸ್‌, ಕಂದಾಯ ಸೇರಿದಂತೆ ವಿವಿಧ 13 ಇಲಾಖೆಯ ಅನುಷ್ಠಾನ ಅಧಿಕಾರಿಗಳು ತರಬೇತಿಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next