Advertisement
ಬದುಕು ನಿಲ್ಲುವಂತಹದ್ದಲ್ಲ. ಅದು ನಿರಂತರ ಚಲಿಸುತ್ತಿರುತ್ತದೆ. ವ್ಯವಸ್ಥೆ ಮತ್ತು ಆಯುಷ್ಯ ನಮ್ಮನ್ನು ಸದಾ ಮುಂದೆ ದೂಡುತ್ತಿರುತ್ತದೆ. ದಾರಿ ಮಧ್ಯೆ ದೊರಕುವಂಥವುಗಳು, ಪಡೆಯುವಂಥವುಗಳು, ಸಿಗುವಂಥವುಗಳಿಗೂ ಇದು ಅನ್ವಯವಾಗುತ್ತದೆ.
Related Articles
Advertisement
ಒಂದು ತರಗತಿಯಲ್ಲಿ ಪರೀಕ್ಷೆ ನಡೆದಿತ್ತು. ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳಿಗೂ ಒಂದೊಂದು ಹಾಳೆಯನ್ನು ಹಂಚಿದರು. ಇದರಲ್ಲೇ ಪ್ರಶ್ನೆ ಇದೆ. ಇದೇ ಹಾಳೆಯ ಹಿಂಬದಿಯಲ್ಲಿ ಉತ್ತರ ಬರೆಯಿರಿ ಎಂದರು. ಎಲ್ಲ ವಿದ್ಯಾರ್ಥಿಗಳೂ ಹಾಳೆಯನ್ನು ಹೊರಳಿಸಿ ನೋಡಿದರು. ಒಂದು ಕಪ್ಪು ಚುಕ್ಕೆಯ ಹೊರತು ಯಾರಿಗೂ ಬೇರೇನೂ ಕಾಣಿಸಲಿಲ್ಲ. ಇದರಲ್ಲಿ ಪ್ರಶ್ನೆಗಳೆಲ್ಲಿವೆ ಗುರುಗಳೇ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಅಧ್ಯಾಪಕರ ನಗುವೇ ಉತ್ತರವಾಗಿತ್ತು. ಇದು ಮಕ್ಕಳಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸಿತು. ಕೊನೆಗೆ ಅಧ್ಯಾಪಕರೇ, ಈ ಪರೀಕ್ಷೆ ಸರಳವಾಗಿದೆ. ನಿಮಗೆ ಏನು ಕಾಣಿಸುತ್ತದೆಯೋ ಅದನ್ನೇ ಬರೆಯಿರಿ ಎಂದರು.
ಎಲ್ಲರೂ ಹಾಳೆಯ ಮಧ್ಯೆಯಿದ್ದ ಆ ಕಪ್ಪು ಚುಕ್ಕೆಯ ಗಾತ್ರ, ಕೋನ ಇತ್ಯಾದಿಗಳನ್ನೇ ಬರೆದರು. ಒಂದು ಚುಕ್ಕೆಯಿಂದಾಗಿ ಇಡೀ ಹಾಳೆಯೇ ಹಾಳಾಯಿತೆಂದೂ ವಿವರಿಸಿದರು. ಎಲ್ಲರಿಗೂ ಆ ಪುಟ್ಟ ಕಪ್ಪು ಚುಕ್ಕೆ ಕಾಣಿಸಿತು. ಅದರ ಹೊರತಾಗಿ ಇಡೀ ಹಾಳೆ ಖಾಲಿಯೇ ಇದೆ. ಅದರಲ್ಲೇ ನಮ್ಮ ಭವಿಷ್ಯವನ್ನು ಬರೆದುಕೊಳ್ಳಬಹುದು ಎಂಬುದು ಯಾರಿಗೂ ಹೊಳೆಯಲಿಲ್ಲ.
ಎಲ್ಲರೂ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಗುರುಗಳು ನಿರಾಶೆಯಿಂದಲೇ ಘೋಷಿಸಿದರು. ಕಪ್ಪು ಚುಕ್ಕೆಯಿಂದ ನಿಮ್ಮ ದೃಷ್ಟಿಯನ್ನು ಕಿತ್ತು, ಖಾಲಿ ಹಾಳೆಯತ್ತ ಗಮನವಿರಿಸಿ ಎಂದೂ ಕಿವಿಮಾತು ಹೇಳಿದರು.
ಆನೆಯ ಶಕ್ತಿಗೆ ಹೋಲಿಸಿದರೆ, ಅದರ ಕಾಲಿಗೆ ಕಟ್ಟಿರುವ ಸರಪಳಿ ಒಂದು ಬಂಧನವಾಗಲು ಸಾಧ್ಯವೇ? ಆದರೆ, ಕುದುರೆಗೆ ಪಟ್ಟಿ ಕಟ್ಟಿದಂತೆ ನಾವು ನಮ್ಮ ಆಲೋಚನೆಗಳಿಗೆ ಮಿತಿ ಹಾಕಿಕೊಳ್ಳುತ್ತೇವೆ. ಅನಂತರ ವಿಸ್ತಾರದ ಕುರಿತು ಗಮನ ಹರಿಸುವುದೇ ಇಲ್ಲ. ನಮ್ಮೆದುರೇ ಅವಕಾಶಗಳ ಆಕಾಶ ಕೊನೆಯಿಲ್ಲದಂತೆ ಚಾಚಿರುವಾಗ ಮುಂದಡಿ ಇಡುವುದಿಲ್ಲ ಎಂದರೆ ಹೇಗೆ? ನಮ್ಮ ದೌರ್ಬಲ್ಯದ ಪರಿಧಿಯನ್ನು ಮೀರಿದರೆ ಮಾತ್ರ ಪರಮೋಚ್ಚ ಸಾಧನೆ ಆಗುವುದು. ಪ್ರತಿಯೊಂದು ಪಯಣವೂ ಆರಂಭವಾಗುವುದು ಒಂದು ಹೆಜ್ಜೆಯಿಂದಲೇ.
ಸಣ್ಣ ಬದಲಾವಣೆಗೆ ಪ್ರತಿಯೊಬ್ಬರೂ ಮುಂದಾದರೆ ಅದೇ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತದೆ. ಕತ್ತಲಾಯಿತೆಂದು ಕೊರಗುವುದೇಕೆ? ಸಣ್ಣ ಹಣತೆಯಿಂದ ಬದುಕನ್ನು ಬೆಳಗಿಸಿಕೊಳ್ಳೋಣ. ಹಣತೆಯಿಲ್ಲದಿದ್ದರೂ ಬಾನಂಗಳದಲ್ಲಿ ಅಸಂಖ್ಯ ನಕ್ಷತ್ರಗಳಿವೆಯಲ್ಲ? ಅವುಗಳ ಬೆಳಕೂ ಸಾಕು, ನಾವು ಸಾಗುವ ದಾರಿಗೆ.ಬನ್ನಿ, ಯಶಸ್ಸಿನೆಡೆಗೆ ಹೆಜ್ಜೆ ಹಾಕೋಣ. – ಅನಂತ ಹುದೆಂಗಜೆ