Advertisement
ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟ ಹಮ್ಮಿಕೊಂಡಿದ್ದ ನಾಟಕೋತ್ಸವ, ಸುಗಮ ಸಂಗೀತ ಸಮಾರೋಪದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ಇದ್ದು, ನನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರವನ್ನು ಸರ್ಕಾರ ಬಹುಬೇಗ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಕಲಾವಿದ ಉಳಿದರೆ ಮಾತ್ರ ರಂಗಕಲೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ರಂಗಭೂಮಿ ಕಲೆಗೆ ಪ್ರೋತ್ಸಾಹಿಸಬೇಕು ಎಂದರಲ್ಲದೇ, ದೃಶ್ಯ ಮಾಧ್ಯಮ ಇಂದು ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಬೆಳೆಯುತ್ತಿದ್ದು, ಈ ಮಾಧ್ಯಮಗಳು ಧಾರಾವಾಹಿ, ರಿಯಾಲಿಟಿ ಶೋ, ಹಾಸ್ಯಭಾಷಣಕಾರ ನಗೆ ಭಾಷಣ ಪ್ರಸಾರ ಮಾಡುತ್ತಾ ಜನರಿನ್ನು ಆಕರ್ಷಣೆ ಮಾಡುತ್ತಿವೆ. ಕಿರುತೆರೆಯ ಧಾರಾವಾಹಿಗಳ ಕಲಾವಿದರು ಬಂದರೆ ಸಾಕು, ಜನ ಟಿಕೆಟ್ ಖರೀದಿಸಿ ಅವರ ಕಾರ್ಯಕ್ರಮ ವೀಕ್ಷಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ದೃಶ್ಯ ಮಾಧ್ಯಮಗಳು ಧಾರಾವಾಹಿ, ನಗೆ ಭಾಷಣಕಾರರ ಕಾರ್ಯಕ್ರಮಕ್ಕೆ ಪ್ರಚಾರ ನೀಡುವಂತೆ ರಂಗಭೂಮಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡಬೇಕು. ಆಗ ರಂಗಭೂಮಿ ಕಲೆ ಅಸ್ತಿತ್ವ ಉಳಿಸಿಕೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ ಎಂದರು.
Related Articles
Advertisement
ರಂಗಭೂಮಿ ಕಲೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಸಹಕಾರ ನೀಡುತ್ತಿದೆ. ಅದರ ಸದುಪಯೋಗವನ್ನು ಕಲಾವಿದರು ಮಾಡಿಕೊಳ್ಳಬೇಕು. ಕುವೆಂಪು ಕನ್ನಡ ಭವನದಲ್ಲಿ ನೂರಾರು ನಾಟಕ, ಸಂಗೀತ ಕಾರ್ಯಕ್ರಮಗಳು ನಡೆಯುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದಿನ ದಿನಗಳಲ್ಲಿ ಉತ್ಸಾಹ ತೋರಬೇಕು. ಆ ಮೂಲಕ ಕನ್ನಡ ನಿತ್ಯೋತ್ಸವ ಆಗುವಂತೆ ಶ್ರಮಿಸಬೇಕು ಎಂದು ಹೇಳಿದರು.
ರಂಗಭೂಮಿ ಕಲಾವಿದರು ಜನರಿಗೆ ಮೆರುಗು ನೀಡುವ ನಿಟ್ಟಿನಲ್ಲಿ ಹೊಸ ನಾಟಕಗಳನ್ನು ಪ್ರದರ್ಶಿಸಬೇಕು. ರಂಗಭೂಮಿ ಕಲೆ ಬೆಳೆಸುವಲ್ಲಿ ತಮ್ಮದೇ ಆದ ಪಾತ್ರ ವಹಿಸಬೇಕು ಎಂದರು.
ಹಿರಿಯ ರಂಗಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ, ನೈಜ ರಂಗಭೂಮಿ ಕಲಾವಿದರನ್ನು ಗುರುತಿಸಿ ಅರ್ಹ ಕಲಾವಿದರಿಗೆ ಆಶ್ರಯ ಯೋಜನೆ ಮನೆಗಳನ್ನು ಮಂಜೂರು ಮಾಡಿಸಿಕೊಡುವಂತೆ ಶಾಸಕ ರವೀಂದ್ರನಾಥ್ ಅವರಿಗೆ ಮನವಿ ಮಾಡಿದರು.
ಪತ್ರಕರ್ತ ಬಸವರಾಜ್ ದೊಡ್ಮನಿ ಮಾತನಾಡಿ, ರಂಗಭೂಮಿ ಕಲಾವಿದರು ಸರ್ಕಾರದ ಸೌಲಭ್ಯಕ್ಕೆ ಅವಲಂಬಿತರಾಗುವಂತಹ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಲಾವಿದರಿಗೆ ಸಮಾಜ, ಜನರು ಕೂಡ ಪ್ರೋತ್ಸಾಹ ನೀಡಬೇಕು. ಜನರು ತಮ್ಮ ಮಕ್ಕಳ ಹುಟ್ಟುಹಬ್ಬ, ಇತರೆ ಕಲ್ಯಾಣ ಕಾರ್ಯಕ್ರಮಗಳಿಗೆ ಹರಕೆ ಹೊತ್ತುಕೊಳ್ಳುವಂತೆ, ಯಕ್ಷಗಾನ, ನಾಟಕಗಳನ್ನು ಆಡಿಸುವ ಹರಕೆ ಹೊತ್ತುಕೊಳ್ಳಬೇಕು. ಆಗ ಈ ಕಲೆ ತನ್ನದೇ ಆದ ಅಸ್ತಿತ್ವ ಕಾಯ್ದುಕೊಳ್ಳುತ್ತದೆ ಎಂದರು.
ಹಿರಿಯ ಕಲಾವಿದ ಜಯಪ್ರಕಾಶ್ ಕೊಡಗನೂರು, ಒಕ್ಕೂಟದ ಅಧ್ಯಕ್ಷ ಕೆ. ವೀರಸ್ವಾಮಿ ಉಪಸ್ಥಿತರಿದ್ದರು. ಮಾರುತೇಶ್ ಮಾಂಡ್ರೆ ರಚನೆಯ ತವರು ಮನೆ…. ನಾಟಕ ಪ್ರದರ್ಶನ ನಡೆಯಿತು.