Advertisement

ನ್ಯಾಯಾಲಯ ಆದೇಶ ಪುನರ್‌ ಪರಿಶೀಲಿಸಲಿ

01:13 PM Nov 23, 2018 | |

ದಾವಣಗೆರೆ: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಅಯ್ಯಪ್ಪಸ್ವಾಮಿ ಕ್ಷೇತ್ರ ರಕ್ಷಣಾ ಸಮಿತಿ ಕಾರ್ಯಕರ್ತರು
ಪ್ರತಿಭಟಿಸಿದ್ದಾರೆ.

Advertisement

ಜಯದೇವ ವೃತ್ತದಲ್ಲಿ ಜಮಾಯಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಶಬರಿಮಲೈ ಶ್ರೀ ಕ್ಷೇತ್ರಕ್ಕೆ ಈವರೆಗೆ ನಿರ್ಬಂಧವಿದ್ದ ಮಹಿಳಾ ಪ್ರವೇಶವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ
ತೆರವು ಮಾಡಲಾಗಿದೆ. ಈ ಕ್ರಮ ಸ್ವಾಗತಾರ್ಹ. ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರವೇಶ ವಿಚಾರವನ್ನು ಧಾರ್ಮಿಕ ನಂಬಿಕೆ ಇಲ್ಲದವರು ಅನಾವಶ್ಯಕವಾಗಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ.

ಕೂಡಲೇ ನ್ಯಾಯಾಲಯ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿದರು. ಶಬರಮಲೈನ ಧಾರ್ಮಿಕ ನಂಬಿಕೆಗಳ ಉಳಿವಿಗಾಗಿ ಶಾಂತಿಯುತ ಹೋರಾಟ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು, ಬಿಜೆಪಿ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಪೊಲೀಸ್‌ ದೌರ್ಜನ್ಯ ತಡೆಯುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಬೇಕು. ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಬರಿಮಲೈಯ ಈ ವಿವಾದ ಸಂಬಂಧ ಕೇರಳ ಸರ್ಕಾರ ತನ್ನ ಹಿಂದೂ ವಿರೋಧಿ ಧೋರಣೆ ಕೈಬಿಡಬೇಕು, ಸುಪ್ರೀಂಕೋರ್ಟ್‌ ನಲ್ಲಿ ಭಕ್ತರ ನಂಬಿಕೆಗೆ ಪೂರಕವಾಗುವಂತೆ ಮೇಲ್ಮನವಿ ಸಲ್ಲಿಸಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು. ಮರುಪರಿಶೀಲನೆ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಆದೇಶವನ್ನೇ ನೆಪವಾಗಿಟ್ಟುಕೊಂಡು 10 ರಿಂದ 50
ವರ್ಷದೊಳಗಿನ ಮಹಿಳೆಯರು ಶಬರಿಮಲೈ ಪ್ರವೇಶಿಸುವ ಯತ್ನ ಮಾಡಬಾರದು. 

Advertisement

ಸರ್ವೋಚ್ಚ ನ್ಯಾಯಾಲಯ ತನ್ನ ಮುಂದಿರುವ ಮರುಪರಿಶೀಲನಾ ಅರ್ಜಿಯನ್ನು ಅತೀ ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮಹಾನಗರ ಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮುಖಂಡರಾದ ಕೆ.ಬಿ. ಶಂಕರನಾರಾಯಣ, ಎಚ್‌.ಎಸ್‌. ನಾಗರಾಜ್‌, ಸಮಿತಿ ಸಂಚಾಲಕ ಉಮಾಪತಿ, ರಾಜನಹಳ್ಳಿ ಶಿವಕುಮಾರ್‌, ಆಣಬೇರು ಜೀವನಮೂರ್ತಿ, ಪಿ.ಸಿ. ಶ್ರೀನಿವಾಸ್‌, ರಾಜಶೇಖರ್‌, ಜೊಳ್ಳಿ ಗುರು, ಸತೀಶ್‌ ಪೂಜಾರಿ, ವೀರೇಶ್‌ ಪೈಲ್ವಾನ್‌, ಗುಮ್ಮನೂರು ಶ್ರೀನಿವಾಸ್‌, ಎಲ್‌.ಡಿ. ಗೋಣೆಪ್ಪ, ಮಾಲಾಧಾರಿಗಳಾದ ಹಾಲೇಶ್‌ ಸ್ವಾಮಿ, ಚೌವ್ಹಾಣ್‌ ಸ್ವಾಮಿ,ಜಗದೀಶ್‌ ಸ್ವಾಮಿ ಸೇರಿದಂತೆ ಸಮಿತಿಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next