Advertisement
ಇಂದು ಹೆಣ್ತನದ ಪರಿಭಾಷೆ ಬದಲಾಗಿದೆ. ಅವಳು ಸುಶಿಕ್ಷಿತಳಾದಂತೆ ಹಾಗೂ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದಂತೆ ಆಕೆಯ ಕುರಿತಾಗಿನ ಸಾಮಾಜಿಕ ದೃಷ್ಟಿಕೋನ ಬದಲಾಗಿದೆ. ಋತುಸ್ರಾವದ ಬಗ್ಗೆ ಹೇಳಲೂ ಹಿಂಜರಿಯುತ್ತಿದ್ದ ಕಾಲ ಹೋಗಿ ಇಂದು “ಹ್ಯಾಪಿ ಟು ಬ್ಲೀಡ್’ ಎನ್ನುವಂತಹ ಆಂದೋಲನಗಳಿಂದ ಮಹಿಳೆಗೆ ತನ್ನಲ್ಲಿನ ದೈಹಿಕ ಮತ್ತು ಮಾನಸಿಕ ಗೊಂದಲಗಳ ಬಗ್ಗೆ ಮುಕ್ತವಾಗಿ ಮಾತನಾಡುವಂತಾಗಿದ್ದು ಆರೋಗ್ಯಕರ ಬೆಳವಣಿಗೆಯೇ ಸರಿ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಋತುಸ್ರಾವದ ಬಗ್ಗೆ ಮುಕ್ತವಾಗಿ ಮಾತನಾಡುವ ಹಾಗೂ ಶುದ್ಧ ನೀರು ಮತ್ತು ಶೌಚಾಲಯಗಳನ್ನು ಒದಗಿಸುವುದು, ಅವರ ದೇಹಕ್ಕೆ ಬೇಕಾದ ಪೋಷಕಾಂಶಗಳ ಸೇವನೆ ಬಗ್ಗೆ ಮಾಹಿತಿ ನೀಡುವುದು. ವೈಜ್ಞಾನಿಕವಲ್ಲದ ವರ್ತನೆಗಳಿಗೆ ಕಡಿವಾಣ ಹಾಕುವುದು, ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸಬೇಕಾದ ಪರಿಕರಗಳ ಬಗ್ಗೆ ತಿಳಿವಳಿಕೆ ನೀಡುವುದು, ತಮ್ಮ ದೈಹಿಕ ಬದಲಾವಣೆಗಳಿಗೆ ಮಹಿಳೆಯರು ಧನಾತ್ಮಕವಾಗಿ ಸ್ಪಂದಿಸುವಂತೆ ಮಾಡುವುದು, ಪುರುಷರಲ್ಲೂ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವುದು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸಂಪೂರ್ಣ ಅಭಿವೃದ್ಧಿಗೆ ಬದ್ಧರಾಗಿರುವುದು, ಜನರನ್ನು ಈ ಬಗ್ಗೆ ಸುಶಿಕ್ಷಿತರನ್ನಾಗಿಸುವುದು, ಸಮಸ್ಯೆಗಳಿಗೆ ಪ್ರಾಯೋಗಿಕವಾದ ಪರಿಹಾರ ನೀಡುವ ಗುರಿಗಳನ್ನು ಈ ದಿನ ಹೊಂದಿದೆ. 100ಕ್ಕೂ ಹೆಚ್ಚು ಸಂಸ್ಥೆಗಳು ಇದರ ಪ್ರಾಯೋಜಕತ್ವ ವಹಿಸಿದೆ. ಈ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಜಾಗತಿಕ ಮಟ್ಟದಲ್ಲಿ ಪರಿಹಾರವನ್ನು ಕಂಡುಹಿಡಿಯುವ ಮಹತ್ತರವಾದ ನಡೆ ಇದು. ಮೇ 28 ಏಕೆ?
ಸಮಾಜ ಮುಂದುವರಿದಿದೆ. ಆದರೂ ಮಹಿಳೆ ತನ್ನ ತಿಂಗಳ ದಿನಗಳ ನೈರ್ಮಲ್ಯದ ಬಗ್ಗೆ ಅಸಡ್ಡೆ ವಹಿಸುತ್ತಿದ್ದಾಳೆ. ಸಮರ್ಪಕವಾದ ಶೌಚಾಲಯದ ಸೌಲಭ್ಯವಿಲ್ಲದೆ ಅಥವಾ ಶುಚಿಯಿಲ್ಲದ ಬಟ್ಟೆಗಳನ್ನು ಉಪಯೋಗಿಸುವ ಮೂಲಕ ತಾನೇ ಅಪಾಯ ತಂದೊಡ್ಡುತ್ತಿದ್ದಾಳೆ. ಅನೇಕರಿಗೆ ಸ್ಯಾನಿಟರಿ ಪ್ಯಾಡ್, ಟ್ಯಾಂಪೂನ್ ಕಪ್‌ಗ್ಳ ಬಳಕೆ ತಿಳಿದಿಲ್ಲ. ಕೆಲವು ಗ್ರಾಮೀಣ ವಿದ್ಯಾರ್ಥಿನಿಯರು ಈ ಮುಜುಗರದಿಂದಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದೂ ಇದೆ. ಮುಟ್ಟಿನ ಸಂದರ್ಭ ಶುಚಿತ್ವ ಮತ್ತು ನೈರ್ಮಲ್ಯದ ಕುರಿತಾಗಿ ಅರಿವು ಮೂಡಿಸಲು ಋತುಸ್ರಾವ ನೈರ್ಮಲ್ಯ ದಿನ ಹುಟ್ಟಿಕೊಂಡಿದೆ.
Related Articles
Advertisement
– ರಶ್ಮಿ ಯಾದವ್ ಕೆ. ದ್ವಿತೀಯ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಪದವಿ ಕಾಲೇಜು, ಉಜಿರೆ.