ಶಹಾಬಾದ: ಮೌಡ್ಯ ಆಚರಣೆಗಳನ್ನು ತಿರಸ್ಕರಿಸುವ ಮೂಲಕ ಸಶಕ್ತ ಭಾರತ ಕಟ್ಟಲು ಸಾಧ್ಯ ಎಂದು ಭೌದ್ಧ ಮಹಾಸಭಾದ ತಾಲೂಕಾಧ್ಯಕ್ಷ ಸುರೇಶ ಮೆಂಗನ ಹೇಳಿದರು.
ರವಿವಾರ ಹಳೆಶಹಾಬಾದನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮೌಡ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.
ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಮಶಾನದಲ್ಲಿ ಮೌಡ್ಯ ವಿರೋಧಿ ದಿನ ಆಚರಿಸುವ ಮೂಲಕ ವೈಚಾರಿಕ, ವೈಜ್ಞಾನಿಕ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ಅಪಾರ ಪ್ರಮಾಣದಲ್ಲಿ ಹರಡಿದರೂ ಇನ್ನೂ ಮೌಡ್ಯತೆ ಎನ್ನುವುದು ನಮ್ಮನ್ನು ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮೌಡ್ಯದಿಂದ ಹೊರಬಂದು ಆರೋಗ್ಯರ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ನಾವೆಲ್ಲರೂ ವೈಜ್ಞಾನಿಕ ಹಾಗೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರಲ್ಲದೇ, ಹಲವಾರು ದೃಷ್ಟಾಂತಗಳನ್ನು ತೆರೆದಿಟ್ಟರು. ಹೋರಾಟಗಾರರಾದ ಬಸವರಾಜ ಮಯೂರ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಮಾತನಾಡಿ, ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಡ್ಯದ ಆಚರಣೆ ನಡೆಯುತ್ತಿದೆ. ಇಂತಹ ಆಚರಣೆಗಳಿಗೆ ಒಳಗಾಗಿ ನಾವು ಅನಾಗರಿಕರಾಗಿ ಬದುಕುತ್ತಿದ್ದೇವೆ. ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಎಪಿಎಂಸಿ ಅಧಿಕಾರಿ ಬಸವರಾಜ ಪಾಟೀಲ ನರಿಬೋಳಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಗಿರಿಮಲ್ಲಪ್ಪ ವಳಸಂಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಪೀಠಿಕೆ ಓದಿ ಪ್ರಮಾಣ ವಚನ ಪಡೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಲ್ಲಿನಾಥ ಪಾಟೀಲ ನಿರೂಪಿಸಿದರು, ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು, ರಮೇಶ ಜೋಗದನಕರ್ ವಂದಿಸಿದರು.
ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಬೆಳ್ಳಪ್ಪ ಕಣದಾಳ, ಬಸವರಾಜ ದಂಡಗುಲಕರ್, ವಿಜಯಕುಮಾರ ಕಂಠಿಕಾರ, ಚನ್ನಬಸಪ್ಪ ಸಿನ್ನೂರ್,ಗಿರಿರಾಜ ಪವಾರ,ಗಣೇಶ ಜಾಯಿ, ಶಿವಶಾಲಕುಮಾರ ಪಟ್ಟಣಕರ್, ಕುಪೇಂದ್ರ ತುಪ್ಪದ್, ರಮೇಶ ಮೀರಜಕರ್, ಲಾಲ ಅಹ್ಮದ್ ಮತ್ತಿತರರು ಇದ್ದರು.